ಪಾತೂರು: ಗೃಹಪ್ರವೇಶಕ್ಕೆ ಇಫ್ತಾರ್ ಕೂಟ ಏರ್ಪಡಿಸಿದ ಚಂದ್ರಣ್ಣ
ಪಾತೂರು: ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿರುವ ಕಾಲದಲ್ಲಿ ಸೌಹಾರ್ದತೆ ಬದುಕುತ್ತಿರುವ ಪಾತೂರಿನಲ್ಲಿ ಚಂದ್ರಣ್ಣ ಎಂಬವರು ತನ್ನ ಗೃಹಪ್ರವೇಶ ಪ್ರಯುಕ್ತ ಪಾತೂರು ಜುಮಾ ಮಸೀದಿ ವಠಾರದಲ್ಲಿ ಇಪ್ತಾರ್ ಕೂಟವನ್ನು ಏರ್ಪಡಿಸಿದರು.
ಸುಮಾರು 150 ಕ್ಕೂ ಅಧಿಕ ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು. ನಂತರ ಶೈಖುನಾ ಪಾತೂರು ಉಸ್ತಾದ್ ರೊಂದಿಗೆ ಪಾತೂರಿನ ಮುಸ್ಲಿಮರು ಚಂದ್ರಣ್ಣರ ಮನೆಗೆ ತಲುಪಿ ಶುಭ ಹಾರೈಸಿದರು.
ಚೌತಿಯ ಮೆರವಣಿಗೆ, ಮಿಲಾದ್ ಮೆರವಣಿಗೆಗೆ ಹಾಗೂ ಇನ್ನಿತರ ಸಂದರ್ಭದಲ್ಲಿ ಪಾತೂರು ಪರಿಸರದಲ್ಲಿ ಸಿಹಿ ತಿಂಡಿ, ಪಾನೀಯ ವಿತರಿಸುವುದು ಇಲ್ಲಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಚಂದ್ರಣ್ಣ ಮೇಸ್ತ್ರಿ ಕೆಲಸವನ್ನು ಪಾತೂರು ಪರಿಸರದಲ್ಲಿ ಹೆಚ್ಚಾಗಿ ನಿರ್ವಹಿಸುವ ಕಾರಣ ಪಾತೂರಿನ ಜನರೊಂದಿಗೆ ಬಹಳ ಆತ್ಮೀಯವಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರಣ್ಣರ ಗೃಹಪ್ರವೇಶಕ್ಕೆ ಪಾತೂರಿನ ಮುಸ್ಲಿಮರಿಗೆ ರಮಝಾನ್ ಉಪವಾಸದಿಂದಾಗಿ ಹೋಗಲು ಸಾಧ್ಯವಾಗಲಿಲ್ಲ. ಇದನ್ನು ತಿಳಿದ ಚಂದ್ರಣ್ಣ ಪಾತೂರು ಜುಮಾ ಮಸೀದಿ ವಠಾರದಲ್ಲಿ ಇಪ್ತಾರ್ ಕೂಟವನ್ನು ಏರ್ಪಡಿಸಿದರು.
ಈ ಇಫ್ತಾರ್ ಕೂಟವು ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಚಂದ್ರಣ್ಣನ ಈ ಸೌಹಾರ್ದತೆಯು ಊರಿನ ಎಲ್ಲರಿಗೂ ಮಾದರಿಯಾಗಲಿ. ಎಂದೆಂದಿಗೂ ಈ ಊರಲ್ಲಿ ಮತ ಸೌಹಾರ್ದತೆಯಿರಲಿ ಎಂದು ಹಲವರು ಶುಭ ಹಾರೈಸಿದ್ದಾರೆ.