ಬಾಂಗ್ಲಾದೇಶಿ ಎಂಬ ತಪ್ಪು ಗ್ರಹಿಕೆಯಿಂದ 3 ವರ್ಷ ಕಾರಾಗೃಹದಲ್ಲಿ ಕಳೆದ ಅಸ್ಸಾಂ ನಿವಾಸಿ

Update: 2019-05-12 17:11 GMT

ಖೊಪಾನಿಕುಚ್ಚಿ, ಮೇ 11: ಗುರುತಿನ ಚೀಟಿಯಲ್ಲಿನ ವಯಸ್ಸಿನ ಗೊಂದಲದಿಂದ ಬಾಂಗ್ಲಾದೇಶಿ ಎಂದು ತಪ್ಪಾಗಿ ಅರ್ಥೈಸಿದ ಪರಿಣಾಮ ಅಸ್ಸಾಂನ ನಾಗರಿಕನೋರ್ವ 3 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ ಪ್ರಕರಣವೊಂದನ್ನು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

 ರೆಹಾತ್ ಅಲಿಯ ಗುರುತು ಚೀಟಿಯಲ್ಲಿ 55 ವರ್ಷ ಎಂದು ನಮೂದಾಗಿತ್ತು. ಆದರೆ, 2015ರಲ್ಲಿ ಅವರು ವಿದೇಶಿಯರ ನ್ಯಾಯಾಧಿಕರಣಕ್ಕೆ ಮೌಖಿಕ ಹೇಳಿಕೆ ನೀಡುವಾಗ 66 ವರ್ಷ ಪ್ರಾಯ ಎಂದು ಹೇಳಿದ್ದರು. ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಪಶ್ಚಿಮ ಗುವಾಹತಿಯ ಹಾಜೊ ಪಟ್ಟಣದ ಸಮೀಪದಲ್ಲಿರುವ ವಿದೇಶಿಯರ ನ್ಯಾಯಾಧಿಕರಣ ರೆಹಾತ್ ಅಲಿ ಅವರ ಪೌರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿ ಬಂಧನಾ ಕೇಂದ್ರಕ್ಕೆ ಕಳುಹಿಸಿತ್ತು.

ರಿಹಾತ್ ಅಲಿಯ ಅಜ್ಜ ಗೋನಿ ಶೇಖ್‌ರ 1947ಕ್ಕಿಂತ ಹಿಂದಿನ ಬಗ್ನಪೋಟಾದ ಭೂಮಿಯ ಡೀಡ್‌ನ ದಾಖಲೆಗಳನ್ನು ಪರಿಗಣಿಸಿ ಗುವಾಹತಿ ಹೈಕೊರ್ಟ್ ರೆಹಾತ್ ಅಲಿ ಅವರನ್ನು ಮೇ 3ರಂದು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ರೆಹಾತ್ ಅಲಿ ಅವರನ್ನು ಮೇ 7ರಂದು ಪಶ್ಚಿಮ ಅಸ್ಸಾಂನ ಗೊಲ್‌ಪಾರದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭ ರೆಹಾತ್ ಅಲಿ, ನಾನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಇದ್ದ ‘ಮನೆ’ಯ ಬಗ್ಗೆ ಏನನ್ನೂ ಹೇಳಲಾರೆ ಎಂದು ಕಾರಾಗೃಹ ಅಧಿಕಾರಿ ಅವರಲ್ಲಿ ಹೇಳಿದ್ದಾರೆ.

 ಈ ಕಾರಾಗೃಹದಲ್ಲಿ ಹೆಣಗಳ ಹಾಗೆ ಬದುಕುವುದಕ್ಕಿಂತ ಸಾಯುವುದೇ ಉತ್ತಮ ಎಂದು ರೆಯಾತ್ ಅಲಿ ಹೇಳಿದ್ದಾರೆ.

ನಲ್ಬರಿ ಜಿಲ್ಲೆಯಿಂದ 20 ಕಿ.ಮೀ. ದೂರವಿರುವ ಬಗ್ನಬೋಟಾದ ತನ್ನ ಹಳ್ಳಿ ಬ್ರಹ್ಮಪುತ್ರ ನದಿಯ ಕೊರೆತಕ್ಕೆ ತುತ್ತಾದಾಗ ರೆಹಾತ್ ಅಲಿ ತಂದೆ ಮುನೀರುದ್ದೀನ್ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲದೆ, ರೆಹಾತ್ ಅಲಿ ಅವರ ಹೆಸರು ಬೇರೆ ಬೇರೆ ದಾಖಲೆಗಳಲ್ಲಿ ‘ರೆಹಾತ್ ಅಲಿ’ ಹಾಗೂ ‘ರೆಹಜಾ ಅಲಿ’ ಎಂದು ನಮೂದಾಗಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಬಾಂಗ್ಲಾದೇಶಿ ಎಂದು ಕಾರಾಗೃಹದಲ್ಲಿ ಕಳೆದ ದಿನಗಳನ್ನು ನಾನು ಹೇಗೆ ಮರೆಯಲಿ? ನಾನು ಬಿಡುಗಡೆಯಾಗುವ ಮುನ್ನ 1,197 ದಿನಗಳಲ್ಲಿ ಪ್ರತಿ ದಿನ ನನ್ನೊಳಗಿನ ಭಾರತೀಯನನ್ನು ಅವರು ಕೊಂದರು’’ ರಿಹಾತ್ ಅಲಿ

ಬಂಧನ ಕೇಂದ್ರದಂತಿರುವ ಗೋಲಪಾರದ ಕೇಂದ್ರ ಕಾರಾಗೃಹ ಅಸ್ಸಾಂನ ಇಂತಹ 6 ಜೈಲುಗಳಲ್ಲಿ ಒಂದು. ವಿದೇಶಿಯರ ನ್ಯಾಯಾಧಿಕರಣ ವಿದೇಶಿಯರು ಎಂದು ಘೋಷಿಸಿದ ವ್ಯಕ್ತಿಗಳನ್ನು ಈ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ರಾಜ್ಯದಲ್ಲಿ ಇಂತಹ 100 ನ್ಯಾಯಾಧಿಕರಣಗಳು ಇವೆ. ಪಾಕಿಸ್ತಾನಿ ಪ್ರಜೆಗಳ ಒಳನುಸುಳುವಿಕೆಯನ್ನು ತಡೆಯಲು 1962ರಲ್ಲಿ ರೂಪಿಸಲಾದ ಅಸ್ಸಾಂನ ಪೊಲೀಸ್‌ನ ಬಾರ್ಡರ್ ವಿಂಗ್ ಬಾಂಗ್ಲಾದೇಶಿ ಎಂದು ಶಂಕಿಸಿದ ವ್ಯಕ್ತಿಗಳ ಹಣೆ ಬರಹವನ್ನು ಈ ನ್ಯಾಯಾಧಿಕರಣ ನಿರ್ಧರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News