ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ ಗೊತ್ತಿರಲಿಲ್ಲ !
ಬಾಲಕೋಟ್ ವಾಯುದಾಳಿ ಸಂದರ್ಭ ಮೋಡ ಕವಿದ ವಾತಾವರಣವಿದ್ದರೂ ಅದರಿಂದ ರೇಡಾರ್ ನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ದಾಳಿ ಮಾಡಲು ಹೇಳಿದೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಮೋಡ ಹಾಗು ರೇಡಾರ್ ಕುರಿತ ಮೋದಿ ಜ್ಞಾನ ಜನರ ನಡುವೆ ತಮಾಷೆಯ ವಿಷಯವಾದರೆ, ವಾಯುದಾಳಿಯಂತಹ ಗಂಭೀರ ವಿಷಯಗಳ ಬಗ್ಗೆ ಪ್ರಧಾನಿ ಇಷ್ಟು ಹಗುರವಾಗಿ ಹೇಗೆ ಮಾತನಾಡಿದರು ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಮೋಡಗಳಿದ್ದರೆ ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂಬ ಪ್ರಧಾನಿ ಹೇಳಿಕೆ ಕುರಿತ ವ್ಯಂಗ್ಯ, ತಮಾಷೆ ಮಾತ್ರ ನಿಲ್ಲುತ್ತಲ್ಲೇ ಇಲ್ಲ. ಈ ಬಗ್ಗೆ ಪ್ರಧಾನಿಯನ್ನು ಕುಟುಕುವವರಲ್ಲಿ ಹೊಸ ಸೇರ್ಪಡೆ ಹಿರಿಯ ಪತ್ರಕರ್ತ, ವಿಶ್ಲೇಷಕ ರವೀಶ್ ಕುಮಾರ್. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಬರೆದಿರುವ ರವೀಶ್ ಪ್ರಧಾನಿ ಹೇಳಿಕೆಯನ್ನು ಹಿಟ್ ಹಿಂದಿ ಚಲನಚಿತ್ರ ' ಹಮ್ ದಿಲ್ ದೇ ಚುಕೇ ಸನಮ್ ' ನಲ್ಲಿ ಬರುವ ಹಾಡೊಂದಕ್ಕೆ ಸಮೀಕರಿಸಿ ಚಾಟಿ ಬೀಸಿದ್ದಾರೆ. ಆ ಚಿತ್ರದಲ್ಲಿ ಸಲ್ಮಾನ್ ಖಾನ್ ರನ್ನು ಪ್ರೀತಿಸುವ ಐಶ್ವರ್ಯ ರೈ ಗೆ ಅಜಯ್ ದೇವ್ಗನ್ ಜೊತೆ ಮದುವೆಯಾದ ಮೇಲಿನ ಕತೆ ಇದೆ. ಚಿತ್ರದ ಹಾಡೊಂದರಲ್ಲಿ ಎಲ್ಲ ಮಹಿಳೆಯರು ತಮ್ಮ ಪತಿಗಾಗಿ ಪ್ರಾರ್ಥಿಸುವಾಗ ಐಶ್ವರ್ಯಗೆ ಮಾತ್ರ ಸಲ್ಮಾನ್ ಕಾಣುತ್ತಿರುತ್ತಾರೆ. ಕೊನೆಗೆ ಆಕೆಯ ಕೈಗೆ ಅಡುಗೆ ಮನೆಯಲ್ಲಿ ಸೋಸಲು ಬಳಸುವ ಜರಡಿ ಕೊಟ್ಟಾಗ ಎದುರಲ್ಲಿ ಅಜಯ್ ದೇವಗನ್ ಬರುತ್ತಾರೆ.
ಆ ಹಾಡಿನ ಲಿಂಕ್ ಶೇರ್ ಮಾಡಿರುವ ರವೀಶ್ " ಚಂದ್ರ ಮೋಡಗಳ ನಡುವೆ ಅವಿತುಕೊಂಡಿದ್ದ. ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ ಗೊತ್ತಿರಲಿಲ್ಲ. ಜರಡಿ ಕೈಗೆತ್ತಿಕೊಳ್ಳುವವರೆಗೂ ಸಲ್ಮಾನ್ ಮಾತ್ರ ಆಕೆಗೆ ಕಾಣುತ್ತಿದ್ದ. ಜರಡಿ ಕೈಗೆತ್ತಿಕೊಂಡ ಕೂಡಲೇ ಅಜಯ್ ದೇವಗನ್ ಎದುರು ಬಂದ. ಜರಡಿಯಲ್ಲಿರುವ ರೇಡಾರ್ ಆಗ ತನ್ನ ಕೆಲಸ ಮಾಡಿಬಿಡುತ್ತದೆ. ಪ್ರತಿ ಭಾರತೀಯ ತನ್ನ ಅಡುಗೆ ಮನೆಯಲ್ಲಿರುವ ಜರಡಿಯನ್ನು ಸರಿಯಾಗಿ ಬಳಸಿದರೆ ದೇಶದ ವಾಯುಪ್ರದೇಶಕ್ಕೆ ಯಾವುದೇ ಹಾನಿಯಾಗಲು ಸಾಧ್ಯವಿಲ್ಲ. ಪ್ರತಿ ವಿಮಾನದಲ್ಲಿ ಒಂದು ಜರಡಿ ಇರಬೇಕು. ಮೋಡ ಕವಿದ ಕೂಡಲೇ ಅದನ್ನು ರೇಡಾರ್ ಆಗಿ ಬಳಸಬಹುದು. ಈ ಹಾಡು ನೋಡಿ. ಇದರಲ್ಲಿ ವೈಜ್ಞಾನಿಕತೆ ತುಂಬಿ ತುಳುಕುತ್ತಿದೆ. ಈ ವಿಷಯ ಪ್ರಧಾನಿಯವರಿಗೆ ಗೊತ್ತಿತ್ತು. ನನಗೆ ಮಾತ್ರ ಈಗಷ್ಟೇ ಗೊತ್ತಾಗಿದೆ. " ಎಂದು ಹೇಳಿ ಪ್ರಧಾನಿ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.