×
Ad

ಜಲಂಚಾರು ದೇವಳಕ್ಕೆ ದೇವೇಗೌಡ ದಂಪತಿ ಬೇಟಿ

Update: 2019-05-13 14:44 IST

ಕಾಪು, ಮೇ 13: ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಸೋಮವಾರ ಕಾಪುವಿನ ಜಲಂಚಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ಆಡಳಿತ ಮಂಡಳಿಯ ವತಿಯಿಂದ ದೇವೇಗೌಡ ದಂಪತಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ದೇವಳದ ಮುಖ್ಯಸ್ಥರು ದೇವಳದ ಇತಿಹಾಸವನ್ನು ವಿವರಿಸಿದರು.

 ಬಳಿಕ ದೇವಸ್ಥಾನದಲ್ಲಿ ದಂಪತಿ ಭೋಜನ ಸ್ವೀಕರಿಸಿದರು. ಅನ್ನ ಸಾಂಬಾರು, ಪಲ್ಯ, ಚಪಾತಿ, ಬಾಜಿ, ಮಾವಿನ ರಸಾಯನವನ್ನು ಸವಿದರು. ಈ ಸಂದರ್ಭ ಮಾತನಾಡಿದ ಗೌಡರು, ನಾನು ಈಶ್ವರ ಭಕ್ತ. ಪ್ರತೀ ಸೋಮವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇನೆ. ಅದರಂತೆ ಇಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದಷ್ಟೇ ಹೇಳಿ ಕಾರನ್ನೇರಿ ಮತ್ತೆ ರೆಸಾರ್ಟ್‌ನತ್ತ ಹೊರಟರು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವಾಸುದೇವ ರಾವ್, ಜಯರಾಮ ಆಚಾರ್ಯ, ಎಸ್.ಪಿ.ಬರ್ಬೋಝ, ಉದಯ ಹೆಗ್ಡೆ, ಶೇಖರ್ ಕೋಟ್ಯಾನ್, ದೇಗುಲದ ಪ್ರಮುಖರಾದ ರವಿರಾಜ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಲೀಲಾಧರ ಶೆಟ್ಟಿ, ಸುಬ್ರಹ್ಮಣ್ಯ ಐತಾಳ್, ಗಣ್ಯರಾದ ಅರುಣ್ ಶೆಟ್ಟಿ ಪಾದೂರು, ಶಶಿಪ್ರಭಾ ಶೆಟ್ಟಿ, ಸಂದೀಪ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಗರ್ಭಗುಡಿಗೆ ತಡೆ: ದೇವೇಗೌಡರು ದೇವಳದ ಗರ್ಭಗುಡಿಯ ಮೆಟ್ಟಿಲು ಹತ್ತಿ ಮೇಲೆ ಹೋಗುತ್ತಿದ್ದಂತೆಯೇ ಕೆಲವರು ಇಲ್ಲೇ ನಿಂತುಕೊಳ್ಳಿ ಮೇಲೆ ಹೋಗಬೇಡಿ ಎಂದು ಹೇಳಿದರು. ಅದನ್ನು ಕೇಳಿಸಿಕೊಳ್ಳದ ಗೌಡರು ಗರ್ಭಗುಡಿಯ ಮೇಲಿರುವ ಮೆಟ್ಟಿಲುಗಳವರೆಗೂ ಹೋದರು. ಈ ವೇಳೆ ದೇವಳದ ಪೂಜಾರಿ ಇಲ್ಲಿಯೇ ನಿಲ್ಲಿ ಎಂದಾಗ ಗೌಡರು ಅಲ್ಲಿಯೇ ನಿಂತರು. ಬಳಿಕ ಪತ್ನಿ ಚೆನ್ನಮ್ಮ ಕೂಡಾ ದೇವೇಗೌಡರ ಬಳಿಯೇ ಹೋಗಿ ನಿಂತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News