ಉಡುಪಿಯಲ್ಲಿ ಶ್ರೀ ಶಂಕರ ಜಯಂತ್ಯುತ್ಸವ
ಉಡುಪಿ, ಮೇ 13: ಶೃಂಗೇರಿ ಶಾರದಾ ಪೀಠದ ಶ್ರೀಶಾಂಕರ ತತ್ವ ಪ್ರಸಾರ ಆಭಿಯಾನದ ವತಿಯಿಂದ ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಆದೇಶ ದಂತೆ ಉಡುಪಿ ಜಿಲ್ಲಾ ಸಂಘಟನೆಯು ಶನಿವಾರ ಉಡುಪಿ ಚಿಟ್ಪಾಡಿಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾಮೂಹಿಕ ಶಂಕರ ಜಯಂತ್ಯುತ್ಸವವನ್ನು ಆಚರಿಸಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರೂ, ಜ್ಞಾನ ಭಾರತಿ ಉಡುಪಿಯ ಕಾರ್ಯದರ್ಶಿಗಳೂ, ಶಾಂಕರ ತತ್ವ ಪ್ರಸಾರ ಅಭಿಯಾನದ ಉಡುಪಿ ಜಿಲ್ಲಾಧ್ಯಕ್ಷರೂ ಆದ ಡಾ.ಎಸ್. ಎಲ್. ಕಾರ್ಣಿಕ್ ವಹಿಸಿದ್ದರು.
ಶಾಂಕರ ತತ್ವಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಪ್ರಪುಲ್ಲಚಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿಯಲ್ಲಿ ಶಾಂಕರ ತತ್ವ ಪ್ರಸಾರದ ಉದ್ಧೇಶಕ್ಕಾಗಿ ಶೃಂಗೇರಿಯ ಶಿಷ್ಯವರ್ಗವೆಲ್ಲ ಒಂದೇ ವೇದಿಕೆಯ ಮೂಲಕ ಕಾರ್ಯವೆಸಗುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿ ಅತಿಥಿಗಳನ್ನು ಸ್ವಾಗತಿಸಿದರು.
ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಟಿ.ಎಸ್.ರಮೇಶ್, ಶಂಕರರ ಜೀವನ ಮತ್ತು ಸಂದೇಶಗಳ ಬಗ್ಗೆ ಮಹತ್ವಪೂರ್ಣವಾದ ಮಾಹಿತಿಗಳನ್ನು ಶಂಕರರಿಂದ ರಚಿತವಾದ ಸಂಸ್ಕೃತ ಕೃತಿಗಳ ಶ್ಲೋಕಗಳ ಉದಾಹರಣೆಯೊಂದಿಗೆ ವಿವರಿಸಿದರು.
ಬೆಂಗಳೂರಿನ ಖ್ಯಾತ ಇಂಜಿನಿಯರ್ ಹಾಗೂ ವಿಕಾಸ ಕವಿ ಬಿ.ವಿ.ರಾವ್ ಶಂಕರರ ಅಧ್ವೈತವಾದವನ್ನು ವೈಜ್ಞಾನಿಕವಾಗಿ ಹೇಗೆ ಒಪ್ಪಿಕೊಳ್ಳಬಹುದೆಂಬ ವಿಚಾರಗಳನ್ನು ವರ್ತಮಾನ ಕಾಲದ ಹಲವು ಉದಾಹರಣೆಗಳೊಂದಿಗೆ ವಿವರಿಸಿದರು.
ಸಭೆಯಲ್ಲಿ ಚಿಟ್ಪಾಡಿ ಶ್ರೀಶಾರದಾಂಬಾ ದೇವಳದ ಆಡಳಿತ ಮುಖ್ಯಸ್ಥ ಜಯರಾಮ ರಾವ್, ಉಡುಪಿಯ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಉಡುಪಿ ಹವ್ಯಕ ಸಭಾದ ಅಧ್ಯಕ್ಷ ಡಿ.ಸದಾಶಿವ ಭಟ್, ಸಗ್ರಿ ವಿಶ್ವ ಬ್ರಾಹ್ಮಣ ಸಮಾಜದ ಬಿ.ಎ.ಆಚಾರ್, ಕಲ್ಯಾಣಪುರ ವೀರಭದ್ರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಜ್ಯೋತಿಪ್ರಸಾದ್ ಶೆಟ್ಟಿಗಾರ್, ಉಡುಪಿ ಕರಾಡ ಸಮಾಜದ ಶ್ರೀಧರ ಭಟ್,ಉಡುಪಿ ಮರಾಠಿ ಸಮಾಜದ ಅಧ್ಯಕ್ಷ ಅನಂತ ನಾಯ್ಕ ಉಪಸ್ಥಿತರಿದ್ದರು.
ಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಪಾರಾಯಣ ಹಾಗೂ ಭಜನೆ ನೆರವೇರಿತು. ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿರು.