×
Ad

ವಿವಾಹಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ: ನಾಲ್ವರ ವಿಚಾರಣೆ; ತೀವ್ರಗೊಂಡ ತನಿಖೆ

Update: 2019-05-13 20:52 IST

ಮಂಗಳೂರು, ಮೇ 13: ನಗರದಲ್ಲಿ ನಡೆದ ವಿವಾಹಿತ ಮಹಿಳೆ ಶ್ರೀಮತಿ ಶೆಟ್ಟಿ (35) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಮಹಿಳೆಯನ್ನು ಭೀಭತ್ಸವಾಗಿ ಕೊಲೆಗೈದು ಮೃತದೇಹದ ತಲೆಯ ಭಾಗವನ್ನು ಕದ್ರಿ ಮತ್ತು ದೇಹದ ಭಾಗ ನಂದಿಗುಡ್ಡೆಯಲ್ಲಿ ಬಿಸಾಡಲಾಗಿತ್ತು. ಕಾಲಿನ ಭಾಗ ಇನ್ನೂ ಪತ್ತೆಯಾಗಿಲ್ಲ. ರವಿವಾರ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ಸಂಜೆ ಶವಮಹಜರು ನಡೆಸಿ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿತ್ತು.

ಮೂರು ತಂಡಗಳ ರಚನೆ: ಮಹಿಳೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಡಾ. ಸಂದೀಪ್ ಪಾಟೀಲ್ ತನಿಖೆಗೆ ಮೂರು ತಂಡಗಳನ್ನು ರಚಿಸಿ ತನಿಖೆ ತ್ವರಿತಗೊಳಿಸುವಂತೆ ಸೂಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಹಲವು ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿದ್ದ ಪತಿಯ ವಿಚಾರಣೆ: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ 2ನೇ ಪತಿ ಸುದೀಪ್ ಎಂಬಾತನನ್ನು ತನಿಖಾ ತಂಡ ಮಂಗಳೂರು ಸಬ್‌ ಜೈಲಿನಲ್ಲಿ ಸೋಮವಾರ ವಿಚಾರಣೆ ನಡೆಸಿದೆ.

ಸುದೀಪ್ ಮೇಲೆ ನಗರದ ನಾನಾ ಠಾಣೆಗಳಲ್ಲಿ ಕಳವು ಪ್ರಕರಣವಿದ್ದು, ಈ ಆರೋಪದ ಮೇಲೆ ಈತ ಜೈಲು ಪಾಲಾಗಿದ್ದ. ಶ್ರೀಮತಿ ಶೆಟ್ಟಿ ಹಾಗೂ ಸುದೀಪ್ ಸಂಬಂಧದಲ್ಲಿಯೂ ಬಿರುಕು ಉಂಟಾಗಿದ್ದು ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಸುದೀಪ್ ಶ್ರೀಮತಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆ: ಮಹಿಳೆಯು ಅತ್ತಾವರ ಸಮೀಪ ಫ್ಯಾನ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದರು. ಅಂಗಡಿಗೆ ಪ್ರತಿನಿತ್ಯ 9 ಗಂಟೆಗೆ ಅಂಗಡಿಗೆ ಹೋಗುತ್ತಿದ್ದರು. ಯಾವಾಗಲೂ ಕಾರಿನಲ್ಲಿ ತೆರಳುತ್ತಿದ್ದ ಶ್ರೀಮತಿ ಶೆಟ್ಟಿ ಶನಿವಾರ ಮಾತ್ರ ಸ್ಕೂಟರ್‌ನಲ್ಲಿ ತೆರಳಿದ್ದರು. ಆದರೆ ಅಂದು ಅಂಗಡಿಗೆ ಮಾತ್ರ ತೆರಳಿರಲಿಲ್ಲ. ಆದರೆ ಮಹಿಳೆ ತನ್ನ ಸ್ಕೂಟರ್‌ನೊಂದಿಗೆ ಅತ್ತಾವರದಿಂದ ಗೋರಿಗುಡ್ಡೆ ಕಡೆಗೆ ತೆರಳಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅತ್ತಾವರದ ಕೆಎಂಸಿ ಬಳಿಯಿಂದ ಬಿಳಿ ಬಣ್ಣದ ಸ್ಕೂಟರ್‌ನ್ನು ಚಲಾಯಿಸಿಕೊಂಡು ಮಹಿಳೆಯು ಹೊರಟಿದ್ದಾರೆ. ಅಲ್ಲಿಂದ ಮಂಗಳಾ ಬಾರ್ ಮಾರ್ಗವಾಗಿ ರೋಶನಿ ನಿಲಯದ ಎದುರು ಪಾಸ್ ಆಗಿದ್ದಾರೆ. ಮುಂದೆ ವೆಲೆನ್ಸಿಯಾ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಗೋರಿಗುಡ್ಡ ಕಡೆಗೆ ಮಹಿಳೆಯು ಸುಮಾರು 9ರಿಂದ 9:30ರ ನಡುವೆ ಹೋಗಿದ್ದಾರೆ. ಮಹಿಳೆಯು ಕಪ್ಪು ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿ ತೆರಳುತ್ತಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಇಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಕೊಂಡು ತನಿಖೆ ಮುಂದುವರಿಸಿದ್ದಾರೆ.

ನಾಗುರಿಯಲ್ಲಿ ಸ್ಕೂಟರ್ ಪತ್ತೆ ?: ಕೊಲೆಯಾದ ಮಹಿಳೆಯ ಸ್ಕೂಟರ್ ನಗರದ ನಾಗುರಿ ಬಳಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News