ಜಲಂಚಾರು ದೇವಸ್ಥಾನಕ್ಕೆ ಭೇಟಿ ನೀಡಿದ ದೇವೇಗೌಡ ದಂಪತಿ
Update: 2019-05-13 21:31 IST
ಉಡುಪಿ, ಮೇ 13: ಪತ್ನಿ ಚೆನ್ನಮ್ಮ ಅವರೊಂದಿಗೆ ಕಾಪು ಸಮೀಪದ ಮೂಳೂರಿನ ಸಾಯಿರಾಧಾ ಹೆರಿಟೇಜ್ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆ ಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೋಮವಾರ ಜಲಂಚಾರು ಗ್ರಾಮದಲ್ಲಿರುವ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಬಂದ ದೇವೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರಲ್ಲದೇ ಬಳಿಕ ಪತ್ನಿಯೊಂದಿಗೆ ದೇವಸ್ಥಾನದಲ್ಲೇ ಭೋಜನ ಪ್ರಸಾದ ಸ್ವೀಕರಿಸಿ ಕೆಲಹೊತ್ತು ವಿಶ್ರಾಂತಿ ಪಡೆದರು.
ದೇವಾಲಯದ ಭೇಟಿ ಬಳಿಕ ರೆಸಾರ್ಟ್‌ಗೆ ಮರಳಿದ ದಂಪತಿ ಅಲ್ಲಿ ವಿಶ್ರಾಂತಿ ಪಡೆದರು. ದೇವೇಗೌಡ ಹಾಗೂ ಚೆನ್ನಮ್ಮ ಕಳೆದ ಐದು ದಿನಗಳಿಂದ ಮೂಳೂರಿನ ರೆಸಾರ್ಟ್‌ನಲ್ಲಿ ಡಾ.ತನ್ಮಯ್ ಗೋಸ್ವಾಮಿ ನೇತೃತ್ವದ ಆಯುರ್ವೇದ ವೈದ್ಯರಿಂದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಪಡೆಯುತಿದ್ದಾರೆ.
ಅವರು ಮೇ 16ರವರೆಗೆ ಇಲ್ಲಿ ಚಿಕಿತ್ಸೆ ಪಡೆಯುವ ನಿರೀಕ್ಷೆ ಇದೆ.