ಮಣಿಪಾಲ: ರಾ.ಹೆದ್ದಾರಿ ಕಾಮಗಾರಿ ಬಿಕ್ಕಟ್ಟು ಪರಿಹಾರ
ಉಡುಪಿ, ಮೇ 13: ಮಲ್ಪೆಯಿಂದ ತೀರ್ಥಹಳ್ಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಉಡುಪಿ ಕಡಿಯಾಳಿಯಿಂದ ಆತ್ರಾಡಿವರೆಗೆ ಈಗ ನಡೆದಿರುವ ಅಗಲೀಕರಣ ಪ್ರಕ್ರಿಯೆಯಲ್ಲಿ ಸಮಸ್ಯೆಗೆ ಸಿಲುಕಿದ್ದ ಮಣಿಪಾಲದ ಟೈಗರ್ ಸರ್ಕಲ್ನಿಂದ ಎಂಐಟಿವರೆಗಿನ ಕಾಮಗಾರಿ ಬಿಕ್ಕಟ್ಟು ಇದೀಗ ಪರಿಹಾರ ಕಂಡಿದೆ.
ಈ ನಿಟ್ಟಿನಲ್ಲಿ ಉಡುಪಿ ಶಾಸಕ ಕೆ ರಘುಪತಿ ಭಟ್ ನೇತೃತ್ವದಲ್ಲಿ ಇಂದು ಮಣಿಪಾಲದ ಮಾಹೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆದು ಮಣಿಪಾಲ ಟೈಗರ್ ಸರ್ಕಲ್ನಿಂದ ಎಂಐಟಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕೆಲಸವನ್ನು ತುರ್ತಾಗಿ ಪ್ರಾರಂಭಿಸಲು ಸಮ್ಮತಿಸಲಾಯಿತು.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರವನ್ನು ಅತಿ ಶೀಘ್ರವೇ ಮಣಿಪಾಲ ಸಂಸ್ಥೆಗೆ ನೀಡುವ ಕುರಿತಂತೆ ಭರವಸೆ ನೀಡಲಾ ಯಿತು. ಸೋಮವಾರ ಬೆಳಗ್ಗೆ ಮಣಿಪಾಲದ ಸಂಸ್ಥೆಯೊಂದಿಗೆ ನಡೆಸಿದ ಸಭೆಯಲ್ಲಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲಾಯಿತು.
ಸಭೆಯ ಬಳಿಕ ಸಂಜೆ ರಘುಪತಿ ಭಟ್ ಅವರು ಮಾಹೆಯ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ರಸ್ತೆಯ ಜಾಗವನ್ನು ಗುರುತಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಲಾಯಿತಲ್ಲದೇ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಆಗುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಮಣಿಪಾಲ ಸಂಸ್ಥೆಯ ಜಾಗವನ್ನು ಅವರ ಅನುಮತಿಯೊಂದಿಗೆ ಪಡೆದು ನಂತರ ಭೂಸ್ವಾಧೀನ ಪ್ರಕ್ರಿಯೆಯನ್ನು ಅತಿಶೀಘ್ರವಾಗಿ ನಡೆಸಿ ಮಾಹೆಯವರಿಗೆ ಪರಿಹಾರವನ್ನು ತ್ವರಿತಗತಿಯಲ್ಲಿ ನೀಡುವ ಬಗ್ಗೆ ಭರವಸೆ ನೀಡಲಾಯಿತು.
ಸಭೆಯಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಳ್ಳಾಲ್, ಟ್ರಸ್ಟಿ ಅಶೋಕ್ ಪೈ, ಪುರುಷೋತ್ತಮ ಶೆಟ್ಟಿ, ಮಾಹೆಯ ಜೈ ವಿಠ್ಠಲ್, ಮಾಹೆಯ ರಿಜಿಸ್ಟ್ರರ್ ಡಾ.ನಾರಾಯಣ್ ಸಭಾಹಿತ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹಿತ ಪ್ರಮುಖರು ಭಾಗವಹಿಸಿದ್ದರು. ಸಂಜೆ ಸ್ಥಳ ಪರಿಶೀಲನೆ ವೇಳೆ ಮಾಹೆ ಪರವಾಗಿ ಜೈವಿಠ್ಠಲ್, ಸಿಎಲ್ಐ ಪರವಾಗಿಸುಬ್ಬಣ್ಣ ಪೈ, ಪ್ರಕಾಶ್ ಹಾಗೂ ಉದಯ ಪೂಜಾರಿ, ನಗರಸಭಾ ಸದಸ್ಯ ಮಂಜುನಾಥ್, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.