ಮೋದಿಯಿಂದ ಸೇನೆಗೆ ಅವಮಾನ: ಕಾಂಗ್ರೆಸ್

Update: 2019-05-13 16:47 GMT

ಹೊಸದಿಲ್ಲಿ,ಮೇ 13: ಮೋಡಕವಿದ ವಾತಾವರಣವಿದ್ದ ಹೊರತಾಗಿಯೂ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವಾಯುದಾಳಿಗಳನ್ನು ನಡೆಸುವಂತೆ ತಾನು ವಾಯುಪಡೆಗೆ ಸೂಚಿಸಿದ್ದೆನೆಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.

 ಪ್ರಧಾನಿ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ‘‘ಕಳೆದ 70 ವರ್ಷಗಳಲ್ಲಿ ಯಾವುದೇ ಪ್ರಧಾನಿ ಸೇನೆಯ ದೈತ್ಯ ಶಕ್ತಿಯನ್ನು ಅಣಕಿಸಿರಲಿಲ್ಲಎಂದು ಟ್ವೀಟ್ ಮಾಡಿದ್ದಾರೆ. ತನ್ನ ‘ಕಚ್ಛಾ ಮೇಧಾವಿತನವು, ಸೇನೆಯ ವೃತ್ತಿಪರತೆಗಿಂತಲೂ ಶ್ರೇಷ್ಠವಾದುದು’ ಎಂದು ಮೋದಿ ಭಾವಿಸಿದ್ದಾರೆ. ಸೇನೆಯ ಹೆಸರು ಹೇಳಿಕೊಂಡು ಮತಗಳಿಸುವ ಭರದಲ್ಲಿ ಮೋದಿ ಸೇನೆಗೆ ಅಪಮಾನವೆಸಗಿದ್ದಾರೆ’’ ಎಂದರು.

ಮೋದಿಯವರು ಸೇನೆಯ ರಣತಂತ್ರಕ್ಕೆ ಅಪಮಾನ ಮಾಡುವ ಮೂಲಕ ಅವರ ಅಕ್ಷಮ್ಯ ಅಪರಾಧವನ್ನು ಎಸಗಿದ್ದಾರೆ ಎಂದರು.

 ‘ನ್ಯೂಸ್ ನೇಶನ್’ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮೋದಿಯವರು, ಪ್ರತಿಕೂಲ ಹವಾಮಾನದ ಹೊರತಾಗಿಯೂ ಫೆಬ್ರವರಿ 26ರಂದು ತಾನು ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿ ವಾಯುದಾಳಿಗೆ ನಡೆಸುವಂತೆ ಭಾರತೀಯ ವಾಯುಪಡೆಗೆ ಸೂಚಿಸಿದ್ದೆನೆಂದು ಹೇಳಿಕೊಂಡಿದ್ದರು. ವಾಸ್ತವವಾಗಿ ಮೋಡಗಳು ಯುದ್ಧವಿಮಾನಗಳು ರಾಡಾರ್‌ಗಳ ಕಣ್ಗಾವಲಿನಿಂದ ಪಾರಾಗಲು ನೆರವಾಗುತ್ತವೆ ಎಂದವರು ತಿಳಿಸಿದ್ದರು.

ಬಾಲಕೋಟ್‌ದಾಳಿಯ ಯೋಜನೆಯ ಬಗ್ಗೆ ರಕ್ಷಣಾ ತಜ್ಞರಿಗೆ ಇರುವ ಸಂದೇಹಗಳನ್ನು ನಿವಾರಿಸಲು ತಾನು ತನ್ನ ಕಚ್ಛಾ ಮೇಧಾವಿತನವನ್ನು ಬಳಸಿಕೊಂಡಿದ್ದಾಗಿ ಪ್ರಧಾನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

   ಈ ಮಧ್ಯೆ ಇನ್ನೋರ್ವ ಕಾಂಗ್ರೆಸ್ ವಕ್ತಾರ ಪವನ್‌ಖೇರಾ ಅವರು, ರಹಸ್ಯವಾಗಿರಿಸಬೇಕಾದ ವಿಷಯಗಳನ್ನು ಮೋದಿ ಅವರು ಬಹಿರಂಗಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಾನು ರಕ್ಷಣಾ ತಜ್ಞರ ಅನಿಸಿಕೆಗಳನ್ನು ತಳ್ಳಿಹಾಕಿದ್ದೇನೆಂದು ಪ್ರಧಾನಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹವಾಮಾನ ನಿರೀಕ್ಷಣಾ ರಾಡಾರ್ ಹಾಗೂ ವೈಮಾನಿಕ ಯಾನ ಕುರಿತ ರಾಡಾರ್ ನಡುವೆ ವ್ಯತ್ಯಾಸ ತಿಳಿಯದಂತಹ ಪ್ರಧಾನಿಯ ಕೈಗೆ ದೇಶವನ್ನು ಒಪ್ಪಿಸಲಾಗಿದೆಯೆಂದವರು ಹೇಳಿದ್ದಾರೆ. ಒಂದು ವೇಳೆ ಅವರಿಗೆ ಆ ಬಗ್ಗೆ ತಿಳಿಯದೆ ಇದ್ದರೂ, ತನ್ನ ಅಜ್ಞಾನವನ್ನು ಅವರು ಪ್ರದರ್ಶಿಸುವ ಬದಲು ಮುಚ್ಚಿಡಬಹುದಿತ್ತು’’ ಎಂದು ಖೇರಾ ತಿಳಿಸಿದರು.

ಮೋದಿ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಮೋದಿಯ ಮೋಡಕವಿದ ಬುದ್ಧಿಯೊಳಗೆ ಯಾವುದೇ ರೇಡಾರ್ ನುಗ್ಗಲು ಸಾಧ್ಯವಿಲ್ಲವೆಂದು ಟ್ವೀಟಿಸಿದ್ದಾರೆ.

 ಈ ಮಧ್ಯೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ನೀತಿಸಂಹಿತೆಯನ್ನು ಉಲ್ಲಂಘಿಸುತ್ತಿರುವ ಪ್ರಧಾನಿ ದೇಶದ ಪ್ರಜಾಸತ್ತೆಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News