ದ.ಕ.: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೈ ಸೇರದ ವಿದ್ಯಾರ್ಥಿ ವೇತನ
ಮಂಗಳೂರು, ಮೇ 14: ಶೈಕ್ಷಣಿಕ ವರ್ಷ (2018-19) ಮುಗಿದರೂ ಕೂಡ ದ.ಕ.ಜಿಲ್ಲೆಯ ಸಾವಿರಾರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಕೈ ಸೇರಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ‘ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುವ ಕಾರಣ ವಿಳಂಬಕ್ಕೆ ಅಧಿಕೃತ ಕಾರಣ ನಮಗೆ ತಿಳಿದಿಲ್ಲ’ ಎಂಬ ಹೇಳಿಕೆ ಬರುತ್ತಿವೆ. ಮೂಲವೊಂದರ ಪ್ರಕಾರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿ ವೇತನ ಬಿಡುಗಡೆಗೊಂಡಿಲ್ಲ ಎನ್ನಲಾಗುತ್ತಿದೆ.
ರಾಜ್ಯ ಸರಕಾರವು ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕೈಸ್ತ, ಜೈನ, ಬುದ್ಧ, ಸಿಖ್, ಪಾರ್ಸಿಗಳ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ವಿದ್ಯಾರ್ಥಿ ವೇತನವನ್ನು ಪ್ರತೀ ವರ್ಷ ನೀಡುತ್ತಿವೆ. ಮೆಟ್ರಿಕ್ ಪೂರ್ವ ಅಂದರೆ 1ನೆ ತರಗತಿಯಿಂದ 10ನೆ ತರಗತಿಯವರೆಗೆ, ಮೆಟ್ರಿಕ್ ನಂತರ ಅಂದರೆ ಪದವಿ ಪೂರ್ವಮ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ವ್ಯಾಸಂಗ ಮಾಡುವ, ಮೆರಿಟ್‌ಕಮ್ ಮೀನ್ಸ್ ಅಂದರೆ ತಾಂತ್ರಿಕ ಮತ್ತು ವೃತ್ತಿಪರ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಅದಕ್ಕಾಗಿ ವಿದ್ಯಾರ್ಥಿಗಳ ಹೆಸರಿನಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯು ಹಿಂದಿನ ವರ್ಷ ಕನಿಷ್ಠ ಶೇ.50 ಅಂಕ ಗಳಿಸಿದ್ದಕ್ಕೆ ದಾಖಲೆ, ಶಾಲಾ ಶುಲ್ಕ ಪಾವತಿ ರಶೀದಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ವಿದ್ಯಾರ್ಥಿಯ ಭಾವಚಿತ್ರವನ್ನು ಲಗತ್ತಿಸಿ ಸೈಬರ್ ಸೆಂಟರ್‌ಗಳಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಕೆಲವು ಸಂಘ-ಸಂಸ್ಥೆಗಳು ಉಚಿತವಾಗಿ ಈ ಸೇವೆಯನ್ನು ನೀಡುತ್ತಿದೆಯಾದರೂ ಬಹುತೇಕ ಸೈಬರ್ ಸೆಂಟರ್‌ನವರು ಇದನ್ನೊಂದು ದಂಧೆಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಆರಂಭದಲ್ಲಿ ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಬಳಿಕ ಅದನ್ನು ರದ್ದುಗೊಳಿಸಿ ವಿದ್ಯಾರ್ಥಿಯ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ ಸಿದ್ಧಪಡಿಸಬೇಕಿತ್ತು. ಶಾಲೆಗೆ ಹೋಗುವ ಅಥವಾ ಶಾಲೆಯ ಮೆಟ್ಟಿಲು ಹತ್ತಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಿಂದ ಆದಾಯ ಎಂಬ ಪ್ರಶ್ನೆಗೆ ಅಧಿಕಾರಿ ವಲಯದಲ್ಲಿ ಉತ್ತರವಿರಲಿಲ್ಲ. ಆದಾಗ್ಯೂ ಪೋಷಕರು/ಹೆತ್ತವರು ಅರ್ಜಿ ಫಾರಂ ಪಡೆದು ಗ್ರಾಮಲೆಕ್ಕಿಗರ ಹಿಂದೆ ಬಿದ್ದು ಇಂತಿಷ್ಟು ಆದಾಯ ಎಂದು ನಮೂದಿಸಿ ನೆಮ್ಮದಿ ಕೇಂದ್ರಕ್ಕೆ ಅರ್ಜಿ ನೀಡಿ ಕನಿಷ್ಠ ಎರಡು ವಾರದೊಳಗೆ ಮತ್ತೆ ಅದೇ ನೆಮ್ಮದಿ ಕೇಂದ್ರಕ್ಕೆ ತೆರಳಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಬಹುದಾಗಿತ್ತು. ಇದರ ಕಾಲಾವಧಿ 5 ವರ್ಷದ್ದಾಗಿದೆ.
ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಪೋಷಕರು ಗ್ರಾಮಲೆಕ್ಕಿಗರ ಸಂಪರ್ಕಿಸಲು ಅಲೆದಾಡುವ ಪರಿಸ್ಥಿತಿಯೂ ಇದೆ. ಅದಲ್ಲದೆ ವಿದ್ಯಾರ್ಥಿಯ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಫೋಟೋ ತೆಗೆಸಬೇಕು. ಅದಕ್ಕೂ ಸಾಕಷ್ಟು ಹಣ ಖರ್ಚು ಮಾಡಬೇಕು. ಜೊತೆಗೆ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿ ತೆಗೆದು, ಸೈಬರ್ ಸೆಂಟರ್ ಮುಂದೆ ಸರದಿ ಸಾಲಿನಲ್ಲಿ ನಿಂತು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲಾ ಗುತ್ತದೆ. ಬಳಿಕ ಅದರ ಪ್ರತಿಯನ್ನು ಶಾಲೆಗೆ ನೀಡಲಾಗುತ್ತದೆ. ಅಲ್ಲಿಂದ ಶಾಲಾ ಮಟ್ಟ, ವಲಯ ಶಿಕ್ಷಣಾಧಿಕಾರಿಗಳ ಮಟ್ಟ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಟ್ಟ ಹೀಗೆ ಹಂತ ಹಂತವಾಗಿ ವಿದ್ಯಾರ್ಥಿ ವೇತನದ ಪ್ರಕ್ರಿಯೆ ನಡೆಯುತ್ತದೆ.
ಸಂಬಂಧಪಟ್ಟ ಇಲಾಖೆಯವರು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡುತ್ತದೆ. ಹೀಗೆ ವಿದ್ಯಾರ್ಥಿ ವೇತನ ಪಡೆಯಲು ಮೊದಲ ಬಾರಿ ಸಾವಿರಾರು ರೂ. ಖರ್ಚು ಮಾಡಿದರೂ ಕೂಡ ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್‌ಗೆ ಜಮೆಯಾಗುವ ಹಣ 1 ಸಾವಿರ ರೂ. ಆಗಿರುತ್ತದೆ. ಬಳಿಕ ಹಂತ ಹಂತವಾಗಿ ಈ ಹಣದಲ್ಲಿ ಏರಿಕೆಯಾಗುತ್ತದೆ. ಆದಾಗ್ಯೂ ಕೆಲವರು ಅರ್ಜಿಯು ಒಂದಲ್ಲೊಂದು ಕಾರಣಕ್ಕಾಗಿ ತಿರಸ್ಕರಿಸಲ್ಪಡುತ್ತದೆ.
ಅಲ್ಲದೆ, ಹಂತ ಹಂತದ ಬೆಳವಣಿಗೆಯ ಬಗ್ಗೆ ಮೊಬೈಲ್ ಸಂದೇಶ ಕೂಡ ಬರುತ್ತದೆ. ಆದರೆ, ಇದೀಗ 2018-19ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ.ಕ.ಜಿಲ್ಲೆಯ ಕೆಲವೇ ವಿದ್ಯಾರ್ಥಿಗಳ ಕೈಗೆ ಹಣ ಸೇರಿದೆ. ಉಳಿದಂತೆ 2019-20ನೆ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡರೂ ಸಾವಿರಾರು ವಿದ್ಯಾರ್ಥಿಗಳ ಅರ್ಜಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಹಣ ಜಮೆ ಅಥವಾ ಅರ್ಜಿ ತಿರಸ್ಕೃತದ ಬಗ್ಗೆಯೂ ಪೂರಕ ಮಾಹಿತಿ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಎಷ್ಟು ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯೂ ಇಲಾಖೆಯಲ್ಲಿ ಇಲ್ಲದಿರು ವುದು ವಿಪರ್ಯಾಸ.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆಯಾಗಿಲ್ಲ ಎನ್ನಲಾಗುತ್ತಿದೆ. ಮೇ 23ರ ಬಳಿಕ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯೂ ಹಲವರಿಗೆ ಇದೆ. ಆದರೆ ಈ ಬಗ್ಗೆ ಇಲಾಖೆಯು ಅಧಿಕೃತವಾಗಿ ಯಾವುದೇ ಹೇಳಿಕೆ ಬಿಡುಗಡೆಗೊಳಿಸದ ಕಾರಣ ಅರ್ಜಿ ಸಿದ್ಧಪಡಿಸಲು ಕೆಲಸಕ್ಕೆ ರಜೆ ಹಾಕಿದ್ದಲ್ಲದೆ, ಸಾವಿರಾರು ರೂ. ಖರ್ಚು ಮಾಡಿದ ಪೋಷಕರು/ಹೆತ್ತವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಾನು ನನ್ನ ಮಗಳ ಸ್ಕಾಲರ್‌ಶಿಪ್‌ಗಾಗಿ ಕಳೆದ ವರ್ಷ ಒಂದೆರಡು ರಜೆ ಹಾಕಿ ಗ್ರಾಮಲೆಕ್ಕಿಗರ ಬಳಿ ತೆರಳಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಪಟ್ಟ ಶ್ರಮ ನನಗೆ ಮಾತ್ರ ಗೊತ್ತು. ನಂತರ ಫೋಟೋ ತೆಗೆಸಿ, ಬ್ಯಾಂಕ್ ಖಾತೆ ತೆರೆದು ಎಲ್ಲಾ ದಾಖಲೆಪತ್ರ ತಯಾರಿಸಿ ಸಿದ್ಧಪಡಿಸಿ ಸೈಬರ್ ಸೆಂಟರ್‌ಗೆ ತೆರಳಿ ಅವರು ಹೇಳಿದಷ್ಟು ಶುಲ್ಕ ನೀಡಿದರೂ ಪ್ರಯೋಜನವಾಗಿಲ್ಲ. ಲಾಭ ಬಿಡಿ, ಅಸಲೇ ಸಿಗದಿದ್ದರೆ ಹೇಗೆ?
-ಮುಹಮ್ಮದ್ ಅನ್ವರ್, ಪಾವೂರು-ಹರೇಕಳ
ಖಾಸಗಿಯಾಗಿ ಸೈಬರ್ ಸೆಂಟರ್‌ನಲ್ಲಿ ಆನ್‌ಲೈನ್‌ನಲ್ಲೇ ಅರ್ಜಿ ತುಂಬಿಸುವ ಕಾರಣ ಒಟ್ಟು ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಎಂಬುದರ ಬಗ್ಗೆ ನಮಗೇನೂ ಅಧಿಕೃತ ಮಾಹಿತಿ ಇಲ್ಲ. ವಿದ್ಯಾರ್ಥಿ ವೇತನವು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಮತ್ತು ಆ ಕುರಿತ ಸಂದೇಶವು ಅರ್ಜಿದಾರರ ಮೊಬೈಲ್‌ಗೆ ಸಲ್ಲಿಕೆಯಾಗುವ ಕಾರಣ ನಮಗೆ ಆ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ನೋಡಲ್ ಅಧಿಕಾರಿ
(ವಿದ್ಯಾರ್ಥಿವೇತನ ವಿಭಾಗ)
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ