ಕಣದಲ್ಲಿರುವ ಪ್ರತಿ ಐವರು ಅಭ್ಯರ್ಥಿಗಳಲ್ಲಿ ಓರ್ವನ ವಿರುದ್ಧ ಕ್ರಿಮಿನಲ್ ಪ್ರಕರಣ!

Update: 2019-05-14 17:19 GMT

ಹೊಸದಿಲ್ಲಿ,ಮೇ 14: 2019ರ ಲೋಕಸಭಾ ಚುನಾವಣಾ ಕಣದಲ್ಲಿರುವ ಸುಮಾರು 8,000 ಅಭ್ಯರ್ಥಿಗಳ ಪೈಕಿ ಸುಮಾರು ಶೇ.10ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂದು ಘೋಷಿಸಿಕೊಂಡಿದ್ದಾರೆ. ಅಂದರೆ ಪ್ರತಿ ಐವರು ಅಭ್ಯರ್ಥಿಗಳ ಪೈಕಿ ಓರ್ವರು ಕ್ರಿಮಿನಲ್ ಪ್ರಕರಣಗಳ ಸರದಾರರಾಗಿದ್ದಾರೆ.

ಶೇ.29ರಷ್ಟು ಅಭ್ಯರ್ಥಿಗಳು ಒಂದು ಕೋಟಿ ರೂ.ಮತ್ತು ಅದಕ್ಕೂ ಹೆಚ್ಚಿನ ವೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಚುನಾವಣೆಗಳ ಮೇಲೆ ನಿಗಾಯಿರಿಸಿರುವ ಅಸೋಸಿಯೇಷನನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸೋಮವಾರ ಬಿಡುಗಡೆಗೊಳಿಸಿರುವ ವರದಿಯು ಇದನ್ನು ಬೆಟ್ಟು ಮಾಡಿದೆ. ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ಗಳ ವಿಶ್ಲೇಷಣೆಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಗೊಳಿಸಲಾಗಿದೆ.

   ಸತತ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಈ ಅಂಕಿಸಂಖ್ಯೆಗಳು ಏರಿಕೆಯನ್ನು ಕಂಡಿವೆ. 2009ರ ಚುನಾವಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದ ಅಭ್ಯರ್ಥಿಗಳ ಪ್ರಮಾಣ ಶೇ.15ರಷ್ಟಿದ್ದರೆ 2019ರಲ್ಲಿ ಅದು ಶೇ.4ರಷ್ಟು ಏರಿಕೆಯನ್ನು ಕಂಡಿದೆ. ಇದೇ ರೀತಿ ಕೋಟ್ಯಧಿಪತಿ ಅಭ್ಯರ್ಥಿಗಳ ಪ್ರಮಾಣ ಶೇ.13ರಷ್ಟಿದ್ದುದು ಶೇ.16ರಷ್ಟು ಏರಿಕೆಯನ್ನು ದಾಖಲಿಸಿದೆ.

 ಹಾಗೆಂದು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿರುವ ಎಲ್ಲ ಅಭ್ಯರ್ಥಿಗಳೂ ಗಂಭೀರ ಸ್ವರೂಪದ ಆರೋಪಗಳನ್ನು ಹೊಂದಿಲ್ಲ. 1070(ಒಟ್ಟು ಅಭ್ಯರ್ಥಿಗಳ ಶೇ.13) ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇವು ಕೊಲೆ,ಕೊಲೆ ಯತ್ನ,ಅಪಹರಣ,ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧ ಇತರ ಅಪರಾಧಗಳಿಗೆ ಸಂಬಂಧಿಸಿವೆ. ಅಂದ ಹಾಗೆ ಚುನಾವಣೆಯಿಂದ ಚುನಾವಣೆಗೆ ತಮ್ಮ ವಿರುದ್ಧ ಗಂಭೀರ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ.

55 ಪ್ರಕರಣಗಳು ಕೊಲೆ,184 ಪ್ರಕರಣಗಳು ಕೊಲೆ ಯತ್ನ,126 ಪ್ರಕರಣಗಳು ಮಹಿಳೆಯರ ವಿರುದ್ಧ ಅಪರಾಧ(ಅತ್ಯಾಚಾರ ಸೇರಿದಂತೆ),47 ಪ್ರಕರಣಗಳು ಅಪಹರಣ ಮತ್ತು 95 ಪ್ರಕರಣಗಳು ದ್ವೇಷ ಭಾಷಣಕ್ಕೆ ಸಂಬಂಧಿಸಿವೆ.

 ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳಲ್ಲಿ ದೊಡ್ಡ ಪಾಲು ಪ್ರಮುಖ ರಾಜಕೀಯ ಪಕ್ಷಗಳು ಹೊಂದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರತಿ ಹತ್ತರಲ್ಲಿ ನಾಲ್ವರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಸಿಪಿಎಂ ಇಂತಹ ಅಭ್ಯರ್ಥಿಗಳ ಅತ್ಯಂತ ಹೆಚ್ಚಿನ ಪಾಲು(ಶೇ.58) ಹೊಂದಿದ್ದರೆ ಬಿಎಸ್‌ಪಿ ಅತ್ಯಂತ ಕಡಿಮೆ(ಶೇ.22) ಅಭ್ಯರ್ಥಿಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News