ಸುವರ್ಣ ತ್ರಿಭುಜ ಬೋಟು ಅವಘಡ ಪ್ರಕರಣ: ನಾಪತ್ತೆಯಾದ ರಮೇಶ್ ಚಿಂತೆಯಲ್ಲಿ ಸಹೋದರ ಆತ್ಮಹತ್ಯೆಗೆ ಯತ್ನ

Update: 2019-05-14 17:40 GMT

ಉಡುಪಿ, ಮೇ 14: ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ರಮೇಶ್ ಎಂಬವರ ಸಹೋದರ ಚಂದ್ರಶೇಖರ್ (30) ಎಂಬವರು ಅಣ್ಣನ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಂಭೀರ ಪರಿಸ್ಥಿತಿಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಒಂದು ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಈ ಘಟನೆ ಆಘಾತ ಉಂಟು ಮಾಡಿದೆ.

ಭಟ್ಕಳದ ಬಂದರ್ ರಸ್ತೆಯ ಶನಿಯಾರ ಮೊಗೇರ ಎಂಬವರಿಗೆ ಐವರು ಗಂಡು ಹಾಗೂ ಇಬ್ಬರು ಹೆಣ್ಣು ಸಹಿತ ಒಟ್ಟು ಏಳು ಮಕ್ಕಳಲ್ಲಿದ್ದು, ಇದರಲ್ಲಿ ಹಿರಿಯ ಮಗ ಮದುವೆಯಾಗಿದ್ದು, ರಮೇಶ್ ಮನೆಗೆ ಆಧಾರವಾಗಿದ್ದರು. ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಇತರರೊಂದಿಗೆ ಮೀನು ಗಾರಿಕೆಗೆ ತೆರಳಿದ್ದ ರಮೇಶ್ ನಾಪತ್ತೆಯಾಗಿದ್ದರು. ಈ ಸುದ್ದಿ ಕೇಳಿ ಚಂದ್ರ ಶೇಖರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಚಂದ್ರಶೇಖರ್ ಕೆಲಸಕ್ಕೆ ಹೋಗದೆ ಮನೆ ಯಲ್ಲೇ ಉಳಿದುಕೊಂಡಿದ್ದರು. ಕೆಲವು ದಿನಗಳ ನಂತರ ಚಂದ್ರಶೇಖರ್ ಚೇತರಿಕೆ ಕಂಡಿದ್ದರು. ಮೇ 1ರಂದು ಆಳಸಮುದ್ರದಲ್ಲಿ ಸುವರ್ಣ ತ್ರಿಭುಜ ಬೋಟಿನ ಅವಶೇಷ ಪತ್ತೆಯಾಗಿರುವ ಸುದ್ದಿ ಕೇಳಿ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿತ್ತು. ಇದೇ ಚಿಂತೆಯಲ್ಲಿ ರಮೇಶ್, ತಾಯಿ ಹಾಸಿಗೆ ಹಿಡಿದರೆ, ತಂದೆ ಅನಾರೋಗ್ಯ ಪೀಡಿತರಾದರು.

ಈ ಎಲ್ಲ ಚಿಂತೆಯಿಂದ ಮತ್ತೆ ಮಾನಸಿಕ ಖಿನ್ನತೆಗೆ ಒಳಗಾದ ಚಂದ್ರಶೇಖರ್ ನಾಲ್ಕು ದಿನಗಳ ಹಿಂದೆ ಅಂಗಡಿಯಿಂದ ತಂದ ಇಲಿಗೆ ಸಂಬಂಧಿಸಿದ ವಿಷ ವನ್ನು ಸೇವಿಸಿದ್ದರು. ಈ ವಿಚಾರ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ವಿಷ ಸೇವನೆಯಿಂದ ಲೀವರ್ ಸಮಸ್ಯೆಯಿಂದ ಜಾಂಡೀಸ್ ಕಾಯಿಲೆಗೆ ತುತ್ತಾದ ಚಂದ್ರಶೇಖರ್‌ನನ್ನು ಸಹೋದರ ನಾಗರಾಜ್ ಚಿಕಿತ್ಸೆಗಾಗಿ ಭಟ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು.

ಮೇ 13ರಂದು ಸಂಜೆ ಚಂದ್ರಶೇಖರ್ ದೇಹಸ್ಥಿತಿ ಮತ್ತೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗ ಲಾಯಿತು. ಈ ವೇಳೆ ಚಂದ್ರಶೇಖರ್ ನೆರೆಮನೆಯ ಮಾಧವ ಎಂಬವರಲ್ಲಿ ವಿಷ ಸೇವಿಸಿರುವ ವಿಚಾರ ತಿಳಿಸಿದರೆನ್ನಲಾಗಿದೆ. ಬಳಿಕ ಸರಕಾರಿ ಆಸ್ಪತ್ರೆಯ ವೈದ್ಯರ ಸೂಚನೆಯಂತೆ ಚಂದ್ರ ಶೇಖರ್‌ರನ್ನು ಅದೇ ದಿನ ಸಂಜೆ 7ಗಂಟೆ ಸುಮಾರಿಗೆ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸ ಲಾಗಿದೆ.

‘ವಿಷ ತೆಗೆದುಕೊಂಡಿರುವ ವಿಚಾರ ಮೊದಲೇ ನಮ್ಮ ಬಳಿ ಹೇಳುತ್ತಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಿಸುತ್ತಿದ್ದೇವು. ನಮಗೆ ಅಣ್ಣ ವಿಷ ತೆಗೆದುಕೊಂಡಿರುವ ವಿಚಾರ ಗೊತ್ತೇ ಇರಲಿಲ್ಲ. ಒಬ್ಬ ಅಣ್ಣನನ್ನು ಕಳೆದು ಕೊಂಡ ನಮ್ಮ ಕುಟುಂಬ ಈವರೆಗೂ ಕಣ್ಣೀರಲ್ಲೇ ಬದುಕುತ್ತಿತ್ತು. ಇದೀಗ ಇನ್ನೊಬ್ಬ ಅಣ್ಣ ಈ ರೀತಿ ಮಾಡಿಕೊಂಡಿದ್ದಾರೆ. ನಾವು ಹೇಗೆ ಬದುಕು ಅಂತ ಗೊತ್ತಾಗಲ್ಲ’

-ನಾಗರಾಜ್, ಚಂದ್ರಶೇಖರ್ ತಮ್ಮ

‘ಮೂರು ನಾಲ್ಕು ದಿನಗಳ ಹಿಂದೆ ಅಪಾಯಕಾರಿ ವಿಷ ಸೇವಿಸಿದ ಪರಿ ಣಾಮ ಚಂದ್ರಶೇಖರ್ ಲೀವರ್‌ಗೆ ಹಾನಿಯಾಗಿದೆ. ಅಲ್ಲದೆ ದೇಹದೊಳಗೆ ರಕ್ತಸ್ರಾವ ಉಂಟಾಗಿ ಕಿಡ್ನಿಗೂ ಹಾನಿಯಾಗುವ ಸಾಧ್ಯತೆ ಇದೆ. ರೋಗಿ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’
-ಡಾ.ಜಿ.ಎಸ್.ಚಂದ್ರಶೇಖರ್, ವೈದ್ಯಕೀಯ ನಿರ್ದೇಶಕರು, ಆದರ್ಶ ಆಸ್ಪತ್ರೆ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News