ಬಿಸಿಸಿಐ ಒಂಬುಡ್ಸ್ ಮನ್‌ರನ್ನು ಭೇಟಿಯಾದ ಸಚಿನ್ ತೆಂಡುಲ್ಕರ್

Update: 2019-05-15 02:24 GMT

ಹೊಸದಿಲ್ಲಿ, ಮೇ 14: ಸ್ವಹಿತಾಸಕ್ತಿ ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಮಾಸ್ಟರ್‌ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮಂಗಳವಾರ ಬಿಸಿಸಿಐ ಒಂಬುಡ್ಸ್‌ಮನ್ ನಿವೃತ್ತ ಜಸ್ಟಿಸ್ ಡಿ.ಕೆ. ಜೈನ್ ಎದುರು ಖುದ್ದಾಗಿ ವಿಚಾರಣೆಗೆ ಹಾಜರಾದರು. ಆದರೆ,ಯಾವುದೇ ಮಹತ್ವಪೂರ್ಣ ನಿರ್ಧಾರ ಕೊನೆಗೊಳ್ಳದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮೇ 20ಕ್ಕೆ ಮುಂದೂಡಲಾಗಿದೆ. ತೆಂಡುಲ್ಕರ್ ಮುಂದಿನ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎನ್ನಲಾಗಿದೆ. ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಹಾಗೂ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯ ಸದಸ್ಯರಾಗಿರುವ 46ರ ಹರೆಯದ ತೆಂಡುಲ್ಕರ್ ಸ್ವಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದು, ಅವರ ವಿರುದ್ಧ ಎ.24 ರಂದು ದೂರು ದಾಖಲಾಗಿತ್ತು. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ(ಎಂಪಿಸಿಎ)ಸದಸ್ಯ ಸಂಜೀವ್ ಗುಪ್ತಾ ದೂರು ದಾಖಲಿಸಿದ್ದರು. ತನ್ನ ವಿರುದ್ಧ ಕೇಳಿಬಂದಿರುವ ಸ್ವಹಿತಾಸಕ್ತಿ ಸಂಘರ್ಷ ಆರೋಪವನ್ನು ತಳ್ಳಿಹಾಕಿರುವ ತೆಂಡುಲ್ಕರ್, ಬಿಸಿಸಿಐಗೆ ಪತ್ರವನ್ನು ಬರೆದಿದ್ದರು. ವಾಸ್ತವದಲ್ಲಿ ಹಿತಾಸಕ್ತಿ ಸಂಘರ್ಷ ಎಂದರೇನು? ಎಂದು ತಿಳಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News