ಟ್ರಂಪ್ ಆಯ್ಕೆಯ ಬಳಿಕ ಆಕ್ರಮಿತ ಪ್ರದೇಶಗಳಲ್ಲಿ ಹೆಚ್ಚು ಮನೆ

Update: 2019-05-15 09:06 GMT

ಜೆರುಸಲೇಮ್, ಮೇ 15: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಇಸ್ರೇಲ್ ಸರಕಾರವು ತನ್ನ ಪಶ್ಚಿಮ ದಂಡೆಯ ವಸತಿ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದೆ ಎಂದು ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟ್ರಂಪ್ ಪರಿಣಾಮದಿಂದಾಗಿ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ನಿವಾಸಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ನಿವಾಸಗಳ ಬಗ್ಗೆ ಟ್ರಂಪ್ ಹೊಂದಿರುವ ಮೃದು ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಪಶ್ಚಿಮ ದಂಡೆಯಲ್ಲಿ ರಸ್ತೆಗಳು, ಶಾಲೆಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗಾಗಿ ಮಾಡಿದ ಖರ್ಚಿನಲ್ಲಿ 2017ರಲ್ಲಿ 39 ಶೇಕಡ ಹೆಚ್ಚಳವಾಗಿದೆ ಎನ್ನುವುದು ಇಸ್ರೇಲ್‌ನಿಂದ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಗಳಿಂದ ಗೊತ್ತಾಗಿದೆ.

1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್ ನಗರಗಳನ್ನು ಇಸ್ರೇಲ್ ವಶಪಡಿಸಿಕೊಂಡ ಬಳಿಕ, ಈ ಎರಡು ನಗರಗಳಲ್ಲಿ ಅದರ ಸುಮಾರು 7 ಲಕ್ಷ ನಾಗರಿಕರು ನೆಲೆಸಿದ್ದಾರೆ.

ಟ್ರಂಪ್ ಆಯ್ಕೆಯ ಬಳಿಕ, ಇಸ್ರೇಲ್ ಸರಕಾರ ಉತ್ತೇಜನಗೊಂಡಿದ್ದು, ಆಕ್ರಮಿತ ಪ್ರದೇಶಗಳಲ್ಲಿ ಅದರ ಚಟುವಟಿಕೆಗಳು ಹೆಚ್ಚಿವೆ ಎಂದು ‘ಪೀಸ್ ನೌ’ ಎಂಬ ಸಂಘಟನೆಯ ಹಗಿಟ್ ಉಫ್ರಾನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News