ಮೌಲಾನಾ ಆಜಾದ್ ಮಾದರಿ ಶಾಲೆಗೆ ಅರ್ಜಿ ಆಹ್ವಾನ

Update: 2019-05-15 15:09 GMT

ಉಡುಪಿ, ಮೇ 15: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2019-20 ನೇ ಸಾಲಿನಲ್ಲಿ ಉಡುಪಿ ಹಾಗೂ ಕಾಪು ತಾಲೂಕಿನಲ್ಲಿ ಹೊಸದಾಗಿ ಮಂಜೂರಾದ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ 6 ಮತ್ತು 7ನೇ ತರಗತಿ ಪ್ರವೇಶಕ್ಕೆ ಅಲ್ಪಸಂಖ್ಯಾತರ ಸಮುದಾಯದವರಿಂದ ( ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಶಾಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಶೇ.75 ಹಾಗೂ ಇತರರಿಗೆ ಶೇ.25ರಷ್ಟು ಸ್ಥಾನಗಳು ಹಾಗೂ ಪ್ರತಿ ತರಗತಿಯಲ್ಲಿ ಹೆಣ್ಣು ಮಕ್ಕಳಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗುವುದು. ಇದು ವಸತಿ ರಹಿತ ಶಾಲೆಯಾಗಿದ್ದು, ಪ್ರತಿ ತರಗತಿಯು 60 ಸಂಖ್ಯಾಬಲ ಹೊಂದಿರುತ್ತದೆ. ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ 2.50 ಲಕ್ಷ ರೂ. ಇದ್ದು, ಅಂಗವಿಕಲ, ಅನಾಥ, ಪೌರಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಇರುತ್ತದೆ. 5 ಮತ್ತು 6ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಯನ್ನು ಸಲ್ಲಿಸಬಹುದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ. ಸುಸಜ್ಜಿತ ಕೊಠಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸಮವಸ್ತ್ರ, ಪಠ್ಯಪುಸ್ತಕ ಒದಗಿಸಲಾಗುವುದು. ನುರಿತ ಅನುಭವಿ ಶಿಕ್ಷಕರಿಂದ ಬೋಧನೆ, ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡಲಾಗುವುದು. ಮಧ್ಯಾಹ್ನದ ಬಿಸಿ ಊಟ, ಕ್ಷೀರ ಭಾಗ್ಯ ಯೋಜನೆ ಲಭ್ಯವಿದೆ. ಕಂಪ್ಯೂಟರ್, ಪ್ರಿಂಟರ್, ಯುಪಿಎಸ್, ಸಿಸಿ ಕ್ಯಾಮರ ಅಳವಡಿಕೆ ಮತ್ತು ಮೂಲಭೂತ ಸೌಲಭ್ಯಗಳು ಮಾದರಿ ಶಾಲೆಯಲ್ಲಿ ಲಭ್ಯವಿರುತ್ತದೆ.

ಅರ್ಜಿಗಳಿಗೆ ಹಾಗೂ ಹೆಚ್ಚಿನ ಮಾಹಿತಿಗೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಉಡುಪಿ (ದೂರವಾಣಿ ಸಂಖ್ಯೆ: 0820- 2520739), ಜಿಲ್ಲಾಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ರಜತಾದ್ರಿ, ಮಣಿಪಾಲ (ದೂರವಾಣಿ: 0820-2574596), ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕಾರ್ಕಳ, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕುಂದಾಪುರ ಇವರನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News