ಉಪ್ಪಂಗಳ ರಾಮ ಭಟ್ಟರಿಗೆ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ

Update: 2019-05-15 15:13 GMT

ಉಡುಪಿ, ಮೇ 15: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಯನ್ನು ಈ ವರ್ಷ ಬಹುಮುಖ ಸಾಧಕ ಡಾ.ಉಪ್ಪಂಗಳ ರಾಮಭಟ್ಟರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

ಕನ್ನಡದ ವಿದ್ವಾಂಸರ ಪರಂಪರೆಯನ್ನು ಶ್ರೀಮಂತಗೊಳಿಸಿದ ಸಂಶೋಧಕ ಪ್ರೊ. ತಾಳ್ತಜೆ ಕೇಶವ ಭಟ್ಟರ (1920-2005) ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಡಾ. ಉಪ್ಪಂಗಳ ರಾಮಭಟ್ಟರಿಗೆ ಮೇ 22ರ ಬುಧವಾರ ಬೆಳಗ್ಗೆ 10:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಡಾ.ಉಪ್ಪಂಗಳ ರಾಮ ಭಟ್ಟರು ಕನ್ನಡ ಪ್ರಾಧ್ಯಾಪಕರಾಗಿ ಭಾಷೆ, ವ್ಯಾಕರಣ ಗಳಿಗೆ ಸಂಬಂಧಿಸಿದ ಸಂಶೋಧನ ಗ್ರಂಥಗಳನ್ನು ರಚಿಸಿದ್ದಾರೆ. ವಿವಿಧ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ದೇಸೀ ಮಾರ್ಗ ಕಾವ್ಯಗಳ ವಿಮರ್ಶೆ, ಕಥೆ, ನಾಟಕ, ಕಾವ್ಯ, ರಚನೆ, ಪ್ರವಾಸಾನುಭವ ಕುರಿತ ಪ್ರಬಂಧ ರಚನೆ, ಪುಸ್ತಕ ಪ್ರಕಾಶನ, ಅಕಲಂಕ ಪ್ರಶಸ್ತಿ ಸ್ಥಾಪನೆಯ ವುೂಲಕ ಕನ್ನಡ ಸೇವೆ ಮಾಡಿದ್ದಾರೆ.

ಡಾ.ರಾಮಭಟ್ಟರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಡಾ.ಹಾ.ಮಾ.ನಾ. ದತ್ತಿ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಸಾಹಿತ್ಯ ಪ್ರಿಯ ಪ್ರಶಸ್ತಿ ಮುಂತಾದ ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಅಧ್ಯಾಪಕ ಸಂಘದ ಅಧ್ಯಕ್ಷಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News