ಗ್ರಾಪಂ ಉಪಚುನಾವಣೆ: ಮೇ 31ರವರೆಗೆ ನಿಷೇಧಾಜ್ಞೆ

Update: 2019-05-15 15:31 GMT

ಮಂಗಳೂರು, ಮೇ 15: ದ.ಕ. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಈ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಚುನಾವಣೆ ನಡೆಯುವ ಸ್ಥಳಗಳಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಜಿಲ್ಲೆಯ ಮಂಗಳೂರು ತಾಲೂಕಿನ ಪಡುಪೆರಾರ ಮತ್ತು ತಲಪಾಡಿ ಗ್ರಾಪಂ, ಪುತ್ತೂರು ತಾಲೂಕಿನ ಕಬಕ ಮತ್ತು ನೆಕ್ಕಿಲಾಡಿ ಗ್ರಾಪಂ ಹಾಗೂ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕೊಯ್ಯೂರು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಆರಂಭವಾಗಿರುವ ನಿಷೇಧಾಜ್ಞೆಯು ಮೇ 31ರಂದು ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ.

ಮೇ 31ರಂದು ಪೂರ್ವಾಹ್ನ 7ರಿಂದ ಮಧ್ಯರಾತ್ರಿಯವರೆಗೆ ಮತ ಎಣಿಕೆಯ ಸಲುವಾಗಿ ಮತಎಣಿಕೆ ನಡೆಯುವ ಕೇಂದ್ರಗಳ 3 ಕಿ.ಮೀ ವ್ಯಾಪ್ತಿ ಪ್ರದೇಶಗಳನ್ನು ಮದ್ಯ ಮುಕ್ತ ದಿನಗಳೆಂದು(ಡ್ರೈಡೇಸ್) ಘೋಷಿಸಲಾಗಿದೆ. ಈ ದಿನಗಳಲ್ಲಿ ಎಲ್ಲ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.

ಮಂಗಳೂರು ತಾಲೂಕಿನ ಪಡುಪೆರಾರ್ ಮತ್ತು ತಲಪಾಡಿ ಗ್ರಾಪಂ, ಪತ್ತೂರು ತಾಲೂಕಿನ ಕಬಕ ಮತ್ತು ನೆಕ್ಕಿಲಾಡಿ ಗ್ರಾಪಂ ಹಾಗೂ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕೊಯ್ಯೂರು ಗ್ರಾಪಂ ಪ್ರದೇಶಗಳಲ್ಲಿ ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲ್‌ಗಳಲ್ಲಾಗಲೀ ನಾನ್ ಪ್ರೊಪ್ರೈಟರ್‌ ಗಳಲ್ಲಿ, ಸ್ಟಾರ್ ಹೋಟೆಲ್‌ಗಳಲ್ಲಾಗಲೀ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News