ಪ್ರಾಪರ್ಟಿ ಕಾರ್ಡ್ ಕಡ್ಡಾಯ: ಅಂತಿಮ ದಿನಾಂಕ ಮುಂದೂಡಲು ಶಾಸಕ ಕಾಮತ್ ಮನವಿ

Update: 2019-05-15 15:33 GMT

ಮಂಗಳೂರು, ಮೇ 15: ಮಂಗಳೂರು ಸಬ್ ರಿಜಿಸ್ಟ್ರಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000ಕ್ಕೂ ಅಧಿಕ ಆಸ್ತಿಗಳಿದ್ದು, ಸದ್ಯ ಕೇವಲ 30ರಿಂದ 35 ಸಾವಿರ ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ. ಅಂತಿಮ ದಿನಾಂಕ ಮುಂದೂಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳೂರು ನಗರದಲ್ಲಿರುವ ಎಲ್ಲ 32 ಗ್ರಾಮಗಳಲ್ಲ್ಲಿರುವ ಆಸ್ತಿಗಳ ಪೈಕಿ ಶೇ. 5ಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಿದ ನಂತರವೇ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದು ಕಾನೂನು ಪ್ರಕಾರ ಸಮಂಜಸವಾಗಿದೆ. ಇದೇ ಮೇ 16ರಂದು ಸ್ತಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಮುಂದೂಡುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮತ್ತು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಅದನ್ನು ರಾಜ್ಯ ಸರಕಾರ ಪರಿಗಣಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ನೀಡಬೇಕು ಎನ್ನುವ ನಿಯಮವನ್ನು ಮುಂದೂಡುವ ಸಮಯದಲ್ಲಿ ಯುಪಿಒಆರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಬೇಕಾದ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪೂರೈಕೆ ಮಾಡಿದ ನಂತರವೇ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದಾಗಿ ಭೂ ದಾಖಲೆಗಳ ಆಯುಕ್ತರು ಹೇಳಿದ್ದರು. ಆದರೆ ಯುಪಿಒಆರ್ ಕಚೇರಿಯ ಎಲ್ಲ ವ್ಯವಸ್ಥೆಗಳು ಸದ್ಯಕ್ಕೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ. ಅಲ್ಲಿ ಯಾರಿಗೂ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದರು.

ಯುಪಿಒಆರ್ ಕಚೇರಿಯಲ್ಲಿ ಕಂಪ್ಯೂಟರ್ಸ್, ಸ್ಕ್ಯಾನರ್ಸ್, ಕ್ಯಾಡ್ ವ್ಯವಸ್ಥೆ ಇನ್ನು ಕೂಡ ಸರಿಯಾಗಿರುವುದಿಲ್ಲ. ಬಂದ ನಾಗರಿಕರಿಗೆ ಕುಳಿತು ಕೊಳ್ಳಲು ಬೇಕಾದ ಸ್ಥಳಾವಕಾಶ, ಆಸನಗಳಿಲ್ಲ ಮತ್ತು ಶೌಚಾಲಯಗಳು ಇಲ್ಲ. ಹೀಗಿರುವಾಗ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿದರೆ ಅದರಿಂದ ನಾಗರಿಕರು ತುಂಬಾ ಸಂಕಟ ಪಡಬೇಕಾಗುತ್ತದೆ. ಪ್ರಾಪರ್ಟಿ ಕಾರ್ಡ್ ಕಡ್ಡಾಯದ ಈಗಿನ ಗಡುವನ್ನು ಮುಂದೂಡಿ ಎಲ್ಲ ವ್ಯವಸ್ಥೆ ಸರಿಯಾದ ನಂತರವೇ ಜಾರಿಗೊಳಿಸಬೇಕು ಎಂದು ಶಾಸಕರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News