ಮಾನವೀಯ ಸಂಬಂಧ ಶಿಥಿಲಗೊಳ್ಳದಿರಲಿ: ಸಾಹಿತಿ ಏರ್ಯ ಲಕ್ಷ್ಮೀನಾರಾಯಣ

Update: 2019-05-15 15:57 GMT

ಮಂಗಳೂರು, ಮೇ 15: ಮಾನವೀಯತೆಯನ್ನೊಳಗೊಂಡ ಕಲೆ ನಮ್ಮ ನಡುವೆ ನಿರಂತರವಾಗಿ ಇರಬೇಕಾಗಿದೆ. ಅದನ್ನು ಯುವಜನಾಂಗದತ್ತ ತೆಗೆದುಕೊಂಡು ಹೋಗಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೂ ನಮ್ಮ ನಡುವಿನ ಮಾನವೀಯ ಸಂಬಂಧಗಳು ಶಿಥಿಲಗೊಳ್ಳದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಮಂಚಿಯ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್, ಬೆಂಗಳೂರು, ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ, ಮಂಗಳೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘಟನೆಗಳ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಂಡ ಬಿ.ವಿ.ಕಾರಂತ ನೆನಪಿನ ಎರಡು ದಿನಗಳ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಲೂರ, ಬೆಂಗಳೂರಿನ ಬಾಬುಕೋಡಿ ಬಿ.ವಿ.ಕಾರಂತ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಜಯರಾಮ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಬಿ.ವಿ.ಕಾರಂತ ದೇಶ ಕಂಡ ಅತ್ಯಂತ ಶ್ರೇಷ್ಠ ನಾಟಕ ನಿರ್ದೇಶಕ ಮತ್ತು ಅತ್ಯಂತ ಶ್ರೇಷ್ಠ ಮಾನವೀಯ ಕಾಳಜಿ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದು ಶುಭ ಹಾರೈಸಿದರು. ಎರಡು ಲಕ್ಷ ರೂಪಾಯಿಯ ಫೆಲೋಶಿಫ್‌ನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಕಾರಂತರನ್ನು ಮೀರಿಸುವ ಕಲಾವಿದರು ಬರಬೇಕು ಎನ್ನುವುದು ನಮ್ಮ ಆಶಯ ಎಂದರು.

ಉದ್ಯಮಿ ಲಯನ್ ಸೂರ್ಯನಾರಾಯಣ ರಾವ್, ಅನಂತ ಕ್ರಷ್ಣ , ಬಿ.ವಿ.ಕಾರಂತ ರಂಗಭೂಮಿ ಟ್ರಸ್ಟ್ ನ ಮಂಚಿಯ ಅಧ್ಯಕ್ಷ ಕಜೆ ರಾಮಚಂದ್ರ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ರಂಗಭೂಮಿಕಾ ಟ್ರಸ್ಟ್ ನದಶಮಾನೋತ್ಸವ ಸ್ಮರಣ ಸಂಚಿಕೆ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ರೂಪಾಂತರ ಬೆಂಗಳೂರು ತಂಡದಿಂದ ಮತ್ಸ್ಯ ಗಂಧಿ ನಾಟಕ ಪ್ರದರ್ಶನ ಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News