ವಿವಾಹವಾಗಿದ್ದೇವೆ ಎಂದು ಸ್ಪಷನೆ ನೀಡಿದ ಪರಾರಿಯಾಗಿದ್ದ ಜೋಡಿ

Update: 2019-05-15 16:52 GMT

ಕಾಸರಗೋಡು : ಪರಾರಿಯಾಗಿದ್ದ ಯುವ ಜೋಡಿಯೊಂದು ತಾವು ವಿವಾಹವಾಗಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದು, ಈ ಮೂಲಕ ಸೃಷ್ಟಿಯಾದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಆದರೆ ತಪ್ಪು ಸಂದೇಶದಿಂದ ಗುಂಪೊಂದು  ಗಲಭೆ ನಡೆಸುವ ಸಂಚು ಕೂಡಾ  ನಡೆಸಿತ್ತು ಎಂಬುದು ಮೇ 13 ರಂದು ನಡೆದ ಘಟನೆ ಸಂಶಯಕ್ಕೆ ಎಡೆ  ಮಾಡಿಕೊಡುತ್ತಿದೆ .  ಕುಂಬಳೆ ಕುಂಟಗೇರಡ್ಕದ  ಪಂಚಮಿ ಎಂಬ ಯುವತಿ ಮತ್ತು ಕುಂಜತ್ತೂರಿನ ಸುಪ್ರೀತ್ ಎಂಬ ಯುವಕ ಹಲವು ವರ್ಷದಿಂದ  ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರು ವಿವಾಹಕ್ಕೆ ನಿರಾಕರಿಸಿದ್ದರಿಂದ ಇಬ್ಬರು  ಮನೆ ಬಿಟ್ಟು ತೆರಳಲು  ಮುಂದಾಗಿದ್ದರು. 

ಈ ಹಿನ್ನೆಲೆಯಲ್ಲಿ ಮೇ 13 ರಂದು ಸಂಜೆ ಸುಪ್ರಿತ್ ತಾನು ಪ್ರೀತಿಸಿದ ಹುಡುಗಿಯನ್ನು ಮನೆಯಿಂದಲೇ ಕರೆ ತಂದಿದ್ದಾನೆ. ಆದರೆ, ಇದನ್ನು ಕಂಡ ಸ್ಥಳೀಯರು ತಪ್ಪಾಗಿ ಗ್ರಹಿಸಿದ್ದು, ಅಪಹರಣದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ತಕ್ಷಣ ಸ್ಥಳೀಯರು ಕಾರ್ಯಾಚರಣೆಗೆ ಮುಂದಾಗಿದ್ದರು  ಹಲವು ಕಡೆಗಳಲ್ಲಿ ವಾಹನ ಗಳನ್ನು ತಡೆದು ವಾಹನದಲ್ಲಿರುವ ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದರು.

ಈ ನಡುವೆ ಯುವತಿಯ ಅಪಹರಣ ಎಂದು ತಪ್ಪು ಮಾಹಿತಿ ರವಾನೆಯಾದ ಹಿನ್ನೆಲೆ ಎರಡು ಕಡೆಗಳಲ್ಲಿ ಘರ್ಷಣೆಗೂ ಕಾರಣವಾಗಿತ್ತು.  ಉಪ್ಪಳ ಐಲ ಬಳಿ    ತಪ್ಪು ತಿಳುವಳಿಕೆ ಕಾರಣ ಅನ್ಯಕೋಮಿನ ಯುವತಿಯ ಅಪಹರಣ ಎಂದು ತಿಳಿದು ದಾರಿಗೆ ಅಡ್ಡಲಾಗಿ ಕಾರನ್ನು ತಡೆಗಟ್ಟಿ ಪುಡಿ ಮಾಡಲಾಗಿದೆ ಬಳಿಕ ವಿಟ್ಲ ಠಾಣೆ ವ್ಯಾಪ್ತಿಯ ಗಡಿ ಪ್ರದೇಶ ಸಾರಡ್ಕದಲ್ಲಿ ರಾತ್ರಿ ವೇಳೆ ಬೊಲೆರೋ ವಾಹನ ತಡೆದ ತಂಡ ವಾಹನವನ್ನು ಸಂಪೂರ್ಣ ಪುಡಿಗೈದಿದೆ. ಅಲ್ಲದೆ, ಈ ಸಂದರ್ಭ ಗುಂಪು ಘರ್ಷಣೆ ನಡೆದಿದೆ. ಇನ್ನು ಇದನ್ನು ತಡೆಯಲು ಪೊಲೀಸರು ಲಾಠಿ ಬೀಸಿದ್ದರು. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದರು .

ಆದರೆ, ಇದೀಗ ಈ ಜೋಡಿ ಮದುವೆ ಮಾಡಿಕೊಂಡಿದ್ದು, ಪರಸ್ಪರ ಖುಷಿಯಲ್ಲಿದ್ದೇವೆ ಎನ್ನುವ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಯಾರೂ ಕೂಡ ತಮ್ಮನ್ನು ಹುಡುಕಬೇಡಿ. ನಮ್ಮ ತಂಟೆಗೆ ಬಂದಲ್ಲಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

ಪುತ್ರಿಯನ್ನು ಅಪಹರಿಸಿರುವುದಾಗಿ ಯುವತಿಯ ತಂದೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು , ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನು ಪತ್ತೆ  ಹಚ್ಚಿ  ಪೊಲೀಸ್ ಠಾಣೆ  ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು  ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News