ಉಡುಪಿ: ಚಂದ್ರಶೇಖರ್ ಆರೋಗ್ಯ ಸ್ಥಿತಿ ಇನ್ನೂ ಗಂಭೀರ

Update: 2019-05-15 16:29 GMT

ಉಡುಪಿ, ಮೇ 15: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿರುವ ಭಟ್ಕಳ ಬಂದರ್ ರೋಡ್‌ನ ಶನಿಯಾರ ತಿಮ್ಮಪ್ಪ ಮೊಗೇರ ಎಂಬವರ ಪುತ್ರ ರಮೇಶ್ ಮೊಗೇರರ ಚಿಂತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಸಹೋದರ ಚಂದ್ರಶೇಖರ್ ಮೊಗೇರ (30) ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಾಣಿಸದೇ ಬುಧವಾರ ಇನ್ನಷ್ಟು ಬಿಗಡಾಯಿಸಿದೆ.

ಮಾರಕವಾದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ 3 ದಿನಗಳ ಬಳಿಕ ವಿಷ ಸೇವನೆ ಬಗ್ಗೆ ನೆರೆಮನೆಯವರಲ್ಲಿ ಬಾಯಿಬಿಟ್ಟಿದ್ದರು. ವಿಷ ರಕ್ತದಲ್ಲಿ ಸೇರಿ ಲಿವರ್‌ಗೆ ಹಾನಿಯಾಗಿದೆ. ದೇಹದೊಳಗೆ ಅತಿಯಾದ ರಕ್ತಸ್ರಾವವೂ ಉಂಟಾಗಿದ್ದು, ಇದರಿಂದ ಕಿಡ್ನಿಯೂ ವೈಲ್ಯಗೊಂಡ ಬಳಿಕ ಆಸ್ಪತ್ರೆಗೆ ದಾಖಲಾದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಂದ್ರಶೇಖರ್‌ಗೆ ನಗರದ ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಮನೆ ಮಂದಿಯೆಲ್ಲ ಆತಂಕದಲ್ಲಿದ್ದಾರೆ. ಬೋಟ್ ಅವಘಡದ ಸುದ್ದಿ ಕೇಳಿ ಹಾಸಿಗೆ ಹಿಡಿದ ತಾಯಿ ಹಾಗೂ ಅನಾರೋಗ್ಯ ಪೀಡಿತ ತಂದೆ ಹಾಗೂ ಸಹೋದರಿಯರಿಗೆ ಚಂದ್ರಶೇಖರ್ ಅವರ ಜೀವನ್ಮಣ ಹೋರಾಟದ ಸುದ್ದಿ ಇನ್ನೂ ತಿಳಿದಿಲ್ಲ.

ಒಬ್ಬ ಅಣ್ಣನನ್ನು ಕಳೆದುಕೊಂಡು ಕಣ್ಣೀರಲ್ಲೇ ಬದುಕುತ್ತಿರುವ ನಮ್ಮ ಕುಟುಂಬಕ್ಕೆ ಚಂದ್ರಶೇಖರರ ಜೀವನ್ಮರಣ ಹೋರಾಟ ಮತ್ತೊಂದು ಬರ ಸಿಡಿಲಿನಂತೆ ಬಡಿದಿದೆ. ಈ ಅಣ್ಣನ ಆತ್ಮಹತ್ಯೆ ಯತ್ನದಿಂದ ಆಕಾಶವೇ ಕಳಚಿ ಬಿದ್ದಂತಾಗಿದೆ. ಮೊದಲೇ ಕಷ್ಟದಲ್ಲಿರುವ ನಮಗೆ ಮತ್ತಷ್ಟು ಕಷ್ಟ ಎದುರಾಗಿದೆ. ಈ ಅಣ್ಣನಾದರೂ ಉಳಿಯಲಿ ಎಂದು ಹಾರೈಸುತಿದ್ದೇವೆ ಎಂದು ಕಣ್ಣೀರು ಹಾಕಿದರು ಚಂದ್ರ ಶೇಖರ್‌ರ ಸಹೋದರ ನಾಗರಾಜ್.

ಕರಾರು ಪತ್ರಕ್ಕೆ ಇನ್ನು ಸಹಿ ಹಾಕದ ಕುಟುಂಬ:  ರಾಜ್ಯ ಸರಕಾರದ ಸಂಕಷ್ಟ ಪರಿಹಾರ ನಿಧಿಯಿಂದ 7 ಕುಟುಂಬಗಳಿಗೂ ಕರಾರು ಒಪ್ಪಂದದ ಮೇರೆಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದು, ನಾಪತ್ತೆಯಾದ ಉಡುಪಿಯ ಇಬ್ಬರು ಮೀನುಗಾರರ ಮನೆ ಮಂದಿ ಸಹಿ ಹಾಕಿದ್ದಾರೆ. ಉಳಿದ ಉತ್ತರ ಕನ್ನಡ ಜಿಲ್ಲೆಯ 5 ಕುಟುಂಬಗಳ ಪೈಕಿ ಒಂದಿಬ್ಬರು ಅರ್ಜಿ ಕೊಟ್ಟರೆ, ಉಳಿದವರು ಕೈಯಲ್ಲೇ ಇಟ್ಟುಕೊಂಡಿದ್ದಾರೆ. ರಮೇಶ್ ಮನೆಯಲ್ಲಿ ಮಾತ್ರ ಈ ಬಗ್ಗೆ ಯಾರೂ ಮಾತನಾಡುವ ಸ್ಥಿತಿ ಇಲ್ಲವಾಗಿದೆ.

ರಾಜ್ಯ ಸರಕಾರದ ಸಂಕಷ್ಟ ಪರಿಹಾರ ನಿಧಿಯಿಂದ 7 ಕುಟುಂಬಗಳಿಗೂ ಕರಾರು ಒಪ್ಪಂದದ ಮೇರೆಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದು, ನಾಪತ್ತೆಯಾದ ಉಡುಪಿಯ ಇಬ್ಬರು ಮೀನುಗಾರರ ಮನೆ ಮಂದಿ ಸಹಿ ಹಾಕಿದ್ದಾರೆ. ಉಳಿದ ಉತ್ತರ ಕನ್ನಡ ಜಿಲ್ಲೆಯ 5 ಕುಟುಂಬಗಳ ಪೈಕಿ ಒಂದಿಬ್ಬರು ಅರ್ಜಿ ಕೊಟ್ಟರೆ, ಉಳಿದವರು ಕೈಯಲ್ಲೇ ಇಟ್ಟುಕೊಂಡಿದ್ದಾರೆ. ರಮೇಶ್ ಮನೆಯಲ್ಲಿ ಮಾತ್ರ ಈ ಬಗ್ಗೆ ಯಾರೂ ಮಾತನಾಡುವ ಸ್ಥಿತಿ ಇಲ್ಲವಾಗಿದೆ.

ನಾಪತ್ತೆಯಾದ 7 ಕುಟುಂಬಗಳ ಮನೆಯವರು ಕರಾರು ಪತ್ರಕ್ಕೆ ಸಹಿ ಹಾಕುವ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದಿದ್ದರು. ಆದರೆ ರಮೇಶ್ ಮೊಗೇರ ಅವರ ಸಹೋದರ ಚಂದ್ರಶೇಖರ್ ಆತ್ಮಹತ್ಯೆ ಯತ್ನದಿಂದಾಗಿ ಆಸ್ಪತ್ರೆಯಲ್ಲೇ ದಿನ ಕಳೆದ ಪರಿಣಾಮ ಇನ್ನೂ ಸಹಿ ಹಾಕಿಲ್ಲ ಎನ್ನುತ್ತಾರೆ ನಾಗರಾಜ್.

ಎಸ್ಪಿ ಭೇಟಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಇಂದು ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಚಂದ್ರಶೇಖರ್ ಅವರ ಆರೋಗ್ಯ ವಿಚಾರಣೆ ನಡೆಸಿ, ವೈದ್ಯರೊಂದಿಗೆ ಚರ್ಚಿಸಿದ್ದಾರೆ.

ಪೊಲೀಸರ ಭೇಟಿ, ವಿಚಾರಣೆ:  ಭಟ್ಕಳ ಬಂದರು ರಸ್ತೆ ನಿವಾಸಿ ಚಂದ್ರಶೇಖರ್ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿರುವ ಆದರ್ಶ ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸರು ಬುಧವಾರ ತೆರಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಿಸಿದ್ದಾರೆ. ಡಿವೈಎಸ್ಪಿ ಟಿ.ಆರ್. ಜೈಶಂಕರ್, ಮಲ್ಪೆ ಠಾಣೆಯ ಪಿಎಸ್‌ಐ ಮಧು ಬಿ.ಇ. ಮಧ್ಯಾಹ್ನ ಆಗಮಿಸಿ, ಚಂದ್ರಶೇಖರ್ ಅವರ ಸಹೋದರ ನಾಗರಾಜ್, ಚಿಕ್ಕಪ್ಪನ ಮಗ ಹರೀಶ್ ಹಾಗೂ ನೆರೆಮನೆಯ ಮಾಧವ ಅವರನ್ನು ವಿಚಾರಿಸಿ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News