ಫಲಿತಾಂಶದ ಬಳಿಕ ಬಿಜೆಪಿಗೆ ಬಿಎಸ್ಪಿ ಬೆಂಬಲ ನೀಡಲಿದೆ ಎಂದ ಮಾಜಿ ನಾಯಕ !

Update: 2019-05-15 16:41 GMT

 ಲಕ್ನೊ, ಮೇ 15: ಚುನಾವಣಾ ಫಲಿತಾಂಶದ ಬಳಿಕ ಮಾಯಾವತಿ ಬಿಜೆಪಿಯನ್ನು ಬೆಂಬಲಿಸಲೇಬೇಕಾದ ಒತ್ತಡದಲ್ಲಿ ಸಿಲುಕಲಿದ್ದಾರೆ ಎಂದು ಕಳೆದ ವರ್ಷ ಬಿಎಸ್ಪಿ ತೊರೆದು ಕಾಂಗ್ರೆಸ್ ಸೇರಿರುವ ನಸೀಮುದ್ದೀನ್ ಸಿದ್ದೀಕಿ ಹೇಳಿದ್ದಾರೆ.

 ಬಿಎಸ್ಪಿ ನಾಯಕಿಯೇ ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ದೇಶದ ಮತ್ತು ಉತ್ತರಪ್ರದೇಶ ರಾಜ್ಯದ ಹಿತಾಸಕ್ತಿ ರಕ್ಷಿಸಲು ಸಮಾಜವಾದಿ ಪಕ್ಷಕ್ಕೆ ಕಾಂಗ್ರೆಸ್‌ನೊಂದಿಗೆ ಸೇರದೆ ಬೇರೆ ದಾರಿಯೇ ಇರುವುದಿಲ್ಲ ಎಂದು ಸಿದ್ದೀಕಿ ಹೇಳಿದ್ದಾರೆ.

ಈ ಹಿಂದೆಯೂ ಮಾಯಾವತಿ ಬಿಜೆಪಿಯ ಜೊತೆ ಕೈಜೋಡಿಸಿದ್ದರು. ರಾಜಕೀಯದಲ್ಲಿ ಯಾವುದೂ ಅಸಂಭವವಲ್ಲ. ಮಾಯಾವತಿಯನ್ನು 33 ವರ್ಷದಿಂದ ನೋಡಿದ್ದೇನೆ. ಆಕೆ ನನ್ನ ಬಗ್ಗೆ ಸ್ವಯಂ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಅವರ ಬಗ್ಗೆ ನನಗೆ ತಿಳಿದಿದೆ ಎಂದು ಸಿದ್ದೀಕಿ ಹೇಳಿದ್ದಾರೆ.

ಮಾಯಾವತಿ ಪ್ರಧಾನಿಯಾಗುವ ಅವಕಾಶದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದೀಕಿ, ಬಿಎಸ್ಪಿಯ ಮಿತ್ರಕೂಟದ ಸಮಾಜವಾದಿ ಪಕ್ಷ ಅಥವಾ ಆರ್‌ಎಲ್‌ಡಿ ಈ ಬಗ್ಗೆ ಯಾವುದೇ ಮಾತಾಡಿಲ್ಲ. ಮುಂದಿನ ಪ್ರಧಾನಿ ಉತ್ತರಪ್ರದೇಶದವರು ಆಗಿರುತ್ತಾರೆ ಎಂದು ಅಖಿಲೇಶ್ ಯಾದವ್ ಒಮ್ಮೆ ಹೇಳಿದ್ದರು ಅಷ್ಟೇ . ಆದ್ದರಿಂದ ಅವರು ಪ್ರಧಾನಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಈ ಹಿಂದೆ ಮಾಯಾವತಿ ಸರಕಾರದಲ್ಲಿ ಸಚಿವರಾಗಿದ್ದ ಸಿದ್ದೀಕಿ, ತನಗೆ ಈಗಲೂ ಮಾಯಾವತಿ ಬಗ್ಗೆ ಗೌರವವಿದೆ. ಆದರೆ ಬಿಎಸ್ಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News