ಮಮತಾ ಫೋಟೋ ವಿರೂಪಗೊಳಿಸಿದ ಪ್ರಕರಣ: ಕ್ಷಮೆಯಾಚನೆಗೆ ನಿರಾಕರಿಸಿದ ಬಿಜೆಪಿ ಕಾರ್ಯಕರ್ತೆ

Update: 2019-05-15 16:46 GMT

ಹೊಸದಿಲ್ಲಿ, ಮೇ 14: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮ ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ ತಾನು ಮಮತಾ ಬ್ಯಾನರ್ಜಿಯ ಕ್ಷಮೆ ಯಾಚಿಸುವುದಿಲ್ಲ ಎಂದವರು ಹೇಳಿದ್ದಾರೆ.

“ನಾನು ಮಾಡಿದ ಕೆಲಸದ ಬಗ್ಗೆ ನನಗೆ ವಿಷಾದವಿಲ್ಲ. ಕ್ಷಮೆ ಯಾಚಿಸುವಂತಹ ಯಾವುದೇ ಕೆಲಸ ನಾನು ಮಾಡಿಲ್ಲ” ಎಂದು ಕೋಲ್ಕತಾದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಿಯಾಂಕಾ ಹೇಳಿದರು.

ತನಗೆ ಜೈಲಿನಲ್ಲಿ ಕಿರುಕುಳ ಮತ್ತು ಹಿಂಸೆ ನೀಡಲಾಗಿದೆ. ಮಂಗಳವಾರ ಜೈಲರ್ ನನ್ನನ್ನು ಜೈಲಿನ ಕೋಣೆಯೊಳಗೆ ದೂಡಿದ್ದಾರೆ. ಓರ್ವ ಕ್ರಿಮಿನಲ್ ಖೈದಿಯಂತೆ ತನ್ನನ್ನು ನಡೆಸಿಕೊಂಡಿದ್ದು ಅತ್ಯಂತ ಒರಟಾಗಿ ವರ್ತಿಸಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದರು. ತಾನು ಹಾಗೂ ಕುಟುಂಬದವರು ಅನವಶ್ಯಕವಾಗಿ ಯಾತನೆ ಅನುಭವಿಸಿದ್ದೇವೆ ಎಂದವರು ಹೇಳಿದರು.

ಈ ಸಂದರ್ಭ ಮಾತನಾಡಿದ ಅವರ ಸಹೋದರ ರಾಜೀವ್ ಶರ್ಮ, ಪ್ರಿಯಾಂಕರನ್ನು ಮಂಗಳವಾರವೇ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಜೈಲಿನ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಮಂಗಳವಾರವೇ ಜೈಲಿಗೆ ತೆರಳಿ ಪ್ರಿಯಾಂಕಾರನ್ನು ಬಿಡುಗಡೆಗೊಳಿಸುವಂತೆ ಕೋರಿದಾಗ, ಸುಪ್ರೀಂಕೋರ್ಟ್ ಆದೇಶದ ಮೂಲ ಪ್ರತಿಯನ್ನು ತರುವಂತೆ ಜೈಲಿನ ಅಧಿಕಾರಿಗಳು ಪಟ್ಟು ಹಿಡಿದರು ಎಂದು ರಾಜೀವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News