ಮಸ್ಕತ್‌ ನಲ್ಲಿ ರಸ್ತೆ ಅಪಘಾತ: ಸುನ್ನತ್ ಕೆರೆ ಯುವಕನ ಮೃತದೇಹ ತವರಿಗೆ

Update: 2019-05-15 17:39 GMT

ಬೆಳ್ತಂಗಡಿ: ಮಸ್ಕತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ ನೂರ್ ಮುಹಮ್ಮದ್ ಯಾನೆ ಶೇಕ್ ಶಬ್‍ನೂರ್ ಅವರ ಅಂತ್ಯಕ್ರಿಯೆ ಬುಧವಾರ ಗುರುವಾಯನಕೆರೆಯಲ್ಲಿ ನಡೆಯಿತು.

ಮಸ್ಕತ್‌ನ ಮುಸನ್ನ ಎಂಬಲ್ಲಿ ಮೇ 11 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ನೂರ್ ಮುಹಮ್ಮದ್ ಮೃತಪಟ್ಟಿದ್ದು, ಗುರುವಾಯನಕೆರೆಯ ಸುನ್ನತ್ ಕೆರೆ ನಿವಾಸಿ ಚಾಬಾ ಸಾಹೇಬ್ ಹಾಗೂ ಕಮರು ದಂಪತಿಯ ಪುತ್ರನಾಗಿರುವ ಈತ ಎರಡು ವರ್ಷದ ಹಿಂದೆ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ಈ ಬಗ್ಗೆ ಕಂಪೆನಿಯವರು ಮಾಹಿತಿ ನೀಡಿದ್ದರು. ಸೋಶಿಯಲ್ ಫಾರಂ ಸಂಘಟನೆಯವರು ಕುಟುಂಬದವರು ನೀಡಿದ ಮಾಹಿತಿಯಂತೆ ಆತ ಕೆಲಸ ಮಾಡುತ್ತಿದ್ದ ಕಂಪೆನಿಯನ್ನು ಸಂಪರ್ಕಿಸಿ ಅಗತ್ಯ ಕಾನೂನು ಕ್ರಮಗಳನ್ನು ಪೂರೈಸಿ ಮೃತದೇಹವನ್ನು ಊರಿಗೆ ತರಲಾಯಿತು.

ಕ್ಯಾಲಿಕೆಟ್ ವಿಮಾನ ನಿಲ್ದಾಣದ ಮೂಲಕ ನೂರ್ ಮುಹಮ್ಮದ್ ಅವರ ಮೃತದೇಹವನ್ನು ಊರಿಗೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಬುಧವಾರ ಅಪರಾಹ್ನ ಅವರ ಮನೆಗೆ ತರಲಾಯಿತು. ಸುನ್ನತ್ ಕೆರೆ ಮಸೀದಿಯಲ್ಲಿ ಅಂತಿಮ ನಮಾಝ್ ನಿರ್ವಹಿಸಿ ಗುರುವಾಯನಕೆರೆ ಮಸೀದಿಯ ದಫನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಮೃತ ನೂರ್ ಮುಹಮ್ಮದ್ ಸ್ಥಳೀಯವಾಗಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಎರಡು ವರ್ಷಗಳ ಹಿಂದೆ ವಿದೇಶಕ್ಕೆ ತೆರಳಿದ್ದು ಅಲ್ಲಿ ವಾಟರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆತ ಊರಿಗೆ ಬರುವವನಿದ್ದು ಆದರೆ ಅದಕ್ಕಿಂತ ಮೊದಲೇ ವಿಧಿ ಅಪಘಾತದ ರೂಪದಲ್ಲಿ ಆತನ ಜೀವವನ್ನು ಬಲಿಪಡೆದುಕೊಂಡಿತ್ತು.  ಅಂತಿಮ ಸಂಸ್ಕಾರದಲ್ಲಿ ನೂರಾರು ಜನರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News