ಬಂಟ್ವಾಳ ತಾ.ಪಂ. ಮಿನಿ ವಿಧಾನಸೌಧ: ಇನ್ನೂ ದುರಸ್ತಿಯಾಗದ ಲಿಫ್ಟ್, ಕೈಕೊಡುವ ಜನರೇಟರ್

Update: 2019-05-15 17:24 GMT

ಬಂಟ್ವಾಳ, ಮೇ 15: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಬಂಟ್ವಾಳ ತಾಲೂಕು ಪಂಚಾಯತ್‍ನ ಆಡಳಿತ ಕಚೇರಿಯು ಆಗಿರುವ ಮಿನಿವಿಧಾನ ಸೌಧ ಮೂಲ ಸೌಕರ್ಯ ಕೊರತೆಯಿಂದ ನಲುಗುತ್ತಿದ್ದು, ಇದರಿಂದ ಕಚೇರಿಯತ್ತ ಬರುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ನಿತ್ಯವೂ ಸಮಸ್ಯೆಯ ಆಗರವಾಗಿದೆ. 

2017ರ ಅಕ್ಟೋಬರ್ 22ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ ಬಳಿಕ ಬಂಟ್ವಾಳ ಮಿನಿ ವಿಧಾನಸೌಧದ ಮೂಲ ಅವ್ಯವಸ್ಥೆಯ ಬಗ್ಗೆ ಈಗ ಕೇಳುವವರೇ ಇಲ್ಲದಂತಾಗಿದೆ. ವಿಧಾನಸೌಧದ ಮುಖ್ಯ ಆಕರ್ಷಣೆಯಾಗಿದ್ದ ಲಿಫ್ಟ್ ಒಂದು ತಿಂಗಳಿನಿಂದ ಕೆಟ್ಟುಹೋಗಿದೆ. ಇಡೀ ಮಿನಿ ವಿಧಾನಸೌಧ ನಿರ್ವಹಣೆಯ ಬ್ಯಾಟರಿ ಹಾಗೂ ಜನರೇಟರ್ ಆಗಾಗ್ಗೆ ಕೈಕೊಡುತ್ತಿರುವ ಕಾರಣ ಲಿಫ್ಟ್ ಚಾಲನೆ ಸಂಪೂರ್ಣವಾಗಿ ನಿಂತು ಹೋಗಿದೆ. ಹೀಗಾಗಿ ಲಿಫ್ಟ್ ಕೈಕೊಟ್ಟದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಯಾರೂ ಕೈಹಾಕಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಸಬ್‍ರಿಜಿಸ್ಟ್ರಾರ್ ಕಚೇರಿ ಇಡೀ ಕಟ್ಟಡದಲ್ಲಿ ಅತ್ಯಂತ ಹೆಚ್ಚು ಚಟುವಟಿಕೆಯಲ್ಲಿರುವ ಕೊಠಡಿಯಾಗಿದ್ದು, ಇಲ್ಲಿಗೆ ತೆರಳುವ ಸಾರ್ವಜನಿಕರು ಲಿಫ್ಟ್ ಕೈಕೊಟ್ಟ ಕಾರಣ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕಾಲು ಗಟ್ಟಿಮುಟ್ಟಾಗಿರುವವರು ತೊಂದರೆ ಇಲ್ಲ ಎಂದು ಹೇಳಿದರೆ, ವೃದ್ಧರು, ಮಹಿಳೆಯರು, ಮಂಡಿ ನೋವಿನವರು ಹಾಗೂ ಅಂಗವಿಕಲರು ಇದರಿಂದ ತೀವ್ರ ತೊಂದರೆಗೊಳಗಾಗುತ್ತಿದ್ದಾರೆ. ಕೆಲವು ವೃದ್ಧರನ್ನು ಎತ್ತಿಕೊಂಡೇ ಹೋಗುವ ಪ್ರಸಂಗವೂ ಇಲ್ಲಿ ಸಾಮಾನ್ಯ ದೃಶ್ಯವಾಗಿದೆ ಎಂದು ಸ್ಥಳೀಯರಾದ ಮುಹಮ್ಮದ್ ನಂದಾವರ ದೂರಿದ್ದಾರೆ.

ನಿರ್ವಹಣೆ ಯಾರದು?:

ಬಂಟ್ವಾಳ ತಾಲೂಕಿನ ಜನರು ಕಚೇರಿಯ ಕೆಲಸಕ್ಕಾಗಿ ಅಲೆದಾಡಬಾರದು ಎಂಬ ಉದ್ದೇಶದಿಂದ ಒಂದೇ ಸೂರಿನಡಿ ಬಹುತೇಕ ಎಲ್ಲ ಕಚೇರಿಗಳು ಕೆಲಸ ಮಾಡುವಂತೆ ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿ ಬಿ.ಸಿರೋಡಿನ ಸುಸಜ್ಜಿತವಾದ ಮಿನಿವಿಧಾನ ಸೌಧವನ್ನು ನಿರ್ಮಾಣ ಮಾಡಿದೆ. ಉದ್ಘಾಟನೆಗೊಂಡ ಕೆಲ ತಿಂಗಳವರೆಗೆ ವ್ಯವಸ್ಥೆ ಸರಿಯಾಗಿತ್ತು. ಆದರೆ, ನಿರ್ವಹಣೆಯ ವಿಚಾರದಲ್ಲಿ ಬಂಟ್ವಾಳ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆ ಗೊಂದಲಗಳಿಂದ ಕಚೇರಿಯು ಅವ್ಯವಸ್ಥೆಯಿಂದ ಕೂಡಿದೆ. ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಶೀಘ್ರ ದುರಸ್ತಿ ಮಾಡುವಂತೆ ತಹಶೀಲ್ದಾರ್ ಅವರಲ್ಲಿ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಲಿಫ್ಟ್ ಇಲ್ಲದೆ ಇಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕಾದರೆ ಪ್ರಯಾಸಪಡಬೇಕಾದ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ತಕ್ಷಣ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
-ಹಾರೂನ್ ರಶೀದ್, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News