ನಮ್ಮ ಮುಸ್ಲಿಂ ಸೋದರರಿಗೆ ಬೆಂಬಲವಾಗಿ ನಿಲ್ಲಿ: ಶ್ರೀಲಂಕಾ ಸೇನೆಯ ಕರೆ

Update: 2019-05-16 07:26 GMT

ಕೊಲಂಬೋ, ಮೇ 16: ಕಳೆದ ತಿಂಗಳು ಈಸ್ಟರ್ ರವಿವಾರದಂದು ಕೊಲಂಬೋ ಮತ್ತು ಸುತ್ತಮುತ್ತಲಿನ ಚರ್ಚುಗಳು ಹಾಗೂ ವಿಲಾಸಿ ಹೊಟೇಲುಗಳಲ್ಲಿ ನಡೆದ ಸರಣಿ ಸ್ಫೋಟಗಳ ನಂತರ ಇತ್ತೀಚೆಗೆ ಅಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಹಲವು ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ದೇಶದ ಸೇನೆಯು ನಾಗರಿಕರಲ್ಲಿ ಕಳಕಳಿಯ ವಿನಂತಿಯೊಂದನ್ನು ಮಾಡಿದೆ. “ಉಗ್ರರಿಗೆ ಬೇಕಾದಂತೆ ವರ್ತಿಸುವ ಬದಲು, ನಮ್ಮ ದೇಶಭಕ್ತ ಮುಸ್ಲಿಮರಿಗೆ ಬೆಂಬಲವಾಗಿ ನಿಲ್ಲಿ, ಎಂಬ ಸಂದೇಶವನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಬೇಕೆಂದು” ಸೇನೆ ಮನವಿ ಮಾಡಿದೆ.

ಶ್ರೀಲಂಕಾದ ಸೇನೆ ಇಂತಹ 30 ಸಂದೇಶಗಳನ್ನು ಪ್ರಕಟಿಸಿದ್ದು ಇದು ದೇಶದಲ್ಲಿರುವ ಮುಸ್ಲಿಂ ವಿರೋಧಿ ಭಾವನೆಗಳನ್ನು ಹಾಗೂ  ವದಂತಿಗಳನ್ನು ದೂರವಾಗಿಸುವುದೆಂಬ ಆಶಾವಾದ ಹೊಂದಿದೆ. ಇತ್ತೀಚಿಗಿನ ಹಿಂಸಾಚಾರದ ನಂತರ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿರುವುದನ್ನೂ ಇಲ್ಲಿ ಸ್ಮರಿಸಬಹುದು.

“ಒಂದು ಸಮುದಾಯ ಇನ್ನೊಂದು ಸಮುದಾಯದ ಜತೆ ಹೋರಾಡುವಂತಾಗಲು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಉಗ್ರರ ಕೈಗಳಲ್ಲಿನ ಸಾಧನಗಳಾಗುವ ಬದಲು ಜಾಣರಾಗಿ'' ಎಂಬರ್ಥ ನೀಡುವ ಹಲವು ಸಂದೇಶಗಳನ್ನು ಸೇನೆ ನೀಡಿದೆ.

ಸೇನೆ ನೀಡಿದ ಕೆಲವೊಂದು ಸಂದೇಶಗಳು ಇಂತಿವೆ

► ಸಿಂಹಳೀಯರು ಮುಸ್ಲಿಮರ ಮೇಲೆ ದಾಳಿ ನಡೆಸುವಂತಾಗಬೇಕೆಂಬುದು ಉಗ್ರರ ಅಜೆಂಡಾ.

► ಈಗ ಉಗ್ರರಿಗೆ ಬಾಂಬ್ ಸ್ಫೋಟಿಸಲು ಸಾಧ್ಯವಿಲ್ಲ. ನಮ್ಮ ಭದ್ರತಾ ಪಡೆಗಳು ಇದನ್ನು ನಿಯಂತ್ರಿಸಿದೆ.

► ನೀವು ನಮ್ಮ ಸಮುದಾಯವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ತೋರಿಸಿಕೊಡುವುದೇ ಉಗ್ರರನ್ನು ಸೋಲಿಸುವ ವಿಧಾನ.

► ಐಸಿಸನ್ನು ವಿರೋಧಿಸುವವರಿಗೆ ಕಲ್ಲೆಸೆದು ಏಕೆ ದಾಳಿ ನಡೆಸುತ್ತೀರಿ?, ನೀವು ಅವರಿಗೆ ಸಹಾಯ ಮಾಡುತ್ತಿದ್ದೀರಾ ?

►ಉಗ್ರರ ಕೈಗಳಲ್ಲಿ ದಾಳವಾಗಬೇಡಿ. ಅವರಿಗೆ ನಮ್ಮನ್ನು ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ.

►ಇಂತಹ ಒಂದು ಸಂದರ್ಭದಲ್ಲಿ ಮುಸ್ಲಿಮರ ಜತೆ  ಕೈಜೋಡಿಸಿ ಉಗ್ರವಾದವನ್ನು ಸೋಲಿಸಬಹುದು.

►ನಮ್ಮ ದೇಶದ ಮಿಲಿಟರಿ ಜತೆ ಕೈಜೋಡಿಸಿ ಮುಸ್ಲಿಮರು ಉಗ್ರವಾದದ ವಿರುದ್ಧ ಹೋರಾಡಿದ್ದಾರೆ.

►ನಮ್ಮ ಏಕತೆಯನ್ನು ಭಗ್ನಗೊಳಿಸಲು ರಾಜಕಾರಣಿಗಳು ಹಾಗೂ ಉಗ್ರರಿಗೆ ಅವಕಾಶ ನೀಡಬೇಡಿ.

►ನಾವೆಲ್ಲರೂ ಒಂದಾಗಿ ಉಗ್ರವಾದದ ವಿರುದ್ಧ ಹೋರಾಡಬೇಕೆಂಬುದೇ ಸಿಂಹಳೀಯರ, ನಮ್ಮ ರಾಷ್ಟ್ರಧ್ವಜದ ಹಾಗೂ ರಾಷ್ಟ್ರಗೀತೆಯ ಆಶಯವಾಗಿದೆ.

►ದೇಶಪ್ರೇಮಿ ಮುಸ್ಲಿಮರ ಜೊತೆಗೆ ನಿಲ್ಲಿ

►ಮುತೂರ್ ನಲ್ಲಿ ಮುಸ್ಲಿಮರು ಎಲ್ ಟಿಟಿಇಯಿಂದ 54 ಸಿಂಹಳ ಕುಟುಂಬಗಳನ್ನು ರಕ್ಷಿಸಿದ್ದರು

►ನಮ್ಮ ಸೇನೆಯ ಜೊತೆ ನಿಂತು ಉಗ್ರವಾದದ ವಿರುದ್ಧ ಹೋರಾಡಿದ್ದಾರೆ

►ಉಗ್ರ ಝಹ್ರಾನ್ ನನ್ನು ಕಟ್ಟಂಕುಡಿಯಲ್ಲಿ ಎಲ್ಲಾ ಮುಸ್ಲಿಮರು ತಿರಸ್ಕರಿಸಿದ್ದರು. ಪೂರ್ವದಲ್ಲೂ ಎಲ್ಲಾ ಮುಸ್ಲಿಂ ಸಂಘಟನೆಗಳು ಆತನನ್ನು ತಿರಸ್ಕರಿಸಿದ್ದವು. ಇದಕ್ಕಾಗಿ ಆತ ಬೇರೆಡೆಗೆ ಹೋದ.

►ಇದು ನಮ್ಮ ಶ್ರೀಲಂಕಾದ ಮುಸ್ಲಿಮ್ ಸಹೋದರ ಸಹೋದರಿಯರು ಆತನನ್ನು ತಿರಸ್ಕರಿಸಿದ್ದರು ಎನ್ನುವುದನ್ನು ನಿರೂಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News