×
Ad

ಅಮರಣಾಂತ ವ್ರತ ‘ಸಂಥಾರಾ’ ಕೈಗೊಂಡ 82 ವರ್ಷದ ಮಹಿಳೆ

Update: 2019-05-16 20:07 IST

ಸೂರತ್,ಮೇ 16: ಇಲ್ಲಿಯ 82ರ ಹರೆಯದ ಜೈನ ಮಹಿಳೆ ಕಂಚನದೇವಿ ಬೈದ್ ಅವರು ತನ್ನ ಜೀವನಕ್ಕೆ ಅಂತ್ಯ ಹಾಡಲು ಮೇ 11ರಿಂದ ಸಂಥಾರಾ ವ್ರತವನ್ನು ಆರಂಭಿಸಿದ್ದಾರೆ. ಸಂಥಾರಾ ವ್ಯಕ್ತಿಯು ಅನ್ನ ಮತ್ತು ನೀರನ್ನು ತ್ಯಜಿಸಿ ಸಾವನ್ನು ಆಹ್ವಾನಿಸುವ ಪದ್ಧತಿಯಾಗಿದೆ. ಜೈನ ಸಮುದಾಯದವರು ಇದನ್ನು ‘ಸಾವಿನ ಉತ್ಸವ’ ಎಂದೂ ಕರೆಯುತ್ತಾರೆ.

“ಸಂಥಾರಾ ನಮ್ಮ ಸಂಸ್ಕೃತಿಯ ಭಾಗವಾಗಿದ್ದು,ನಮಗೆ ಹೊಸದೇನಲ್ಲ. ಈ ಮೊದಲು ನಮ್ಮ ಕುಟುಂಬದ ಹಿರಿಯರು ಈ ವ್ರತವನ್ನು ಪಾಲಿಸಿದ್ದರು ಎನ್ನುವುದನ್ನು ನಾನು ಕೇಳಿದ್ದೆ. ಇದನ್ನು ನಮ್ಮ ಕಣ್ಣುಗಳೆದುರೇ ನೋಡುವುದು ಸುಲಭವಲ್ಲ,ಆದರೆ ಅಜ್ಜಿ ಮುಕ್ತಿಯನ್ನು ಪಡೆಯುತ್ತಾರೆ ಎನ್ನುವುದು ನಮಗೆ ಸಂತಸವನ್ನುಂಟು ಮಾಡಿದೆ” ಎಂದು ಕಂಚನದೇವಿಯ ಮೊಮ್ಮಗಳು ನಿವೇದಿತಾ ನವ್ಲಾಖಾ ಹೇಳಿದರು.

“ಯಾವುದೇ ಔಷಧಿಯಿಂದ ನಮ್ಮ ಕಾಯಿಲೆ ವಾಸಿಯಾಗುವುದಿಲ್ಲ ಮತ್ತು ಸಾವು ಸಮೀಪಿಸಿದೆ ಎಂದು ಅನ್ನಿಸಿದಾಗ ಆತ್ಮವು ದೇಹವನ್ನು ತೊರೆಯುವಂತಾಗಲು ನಾವು ಸಂಥಾರಾವನ್ನು ಕೈಗೊಳ್ಳುತ್ತೇವೆ. ತಲೆಮಾರುಗಳಿಂದಲೂ ಇದು ನಡೆದುಕೊಂಡು ಬಂದಿದೆ ಮತ್ತು ನಮ್ಮ ಹಿರಿಯರು ಬೋಧಿಸಿರುವ ಪದ್ಧತಿಯನ್ನು ನಾವು ಅನುಸರಿಸುತ್ತಿದ್ದೇವೆ” ಎಂದು ಕಂಚನದೇವಿಯ ಪುತ್ರ ಪುಷ್ಪರಾಜ ಸಾಂಖ್ಲಾ ತಿಳಿಸಿದರು.

ತನ್ನ ಇಬ್ಬರು ಹಿರಿಯ ಸೋದರರೂ ಸಂಥಾರಾವನ್ನು ಆಚರಿಸಿ ಮೋಕ್ಷವನ್ನು ಪಡೆದಿದ್ದರು ಎಂದು ಕಂಚನದೇವಿಯವರ ಕಿರಿಯ ಸೋದರ ದೀಪಚಂದ್ ಸಾಂಖ್ಲಾ ಹೇಳಿದರು.

ಕಂಚನದೇವಿಯವರ ಮನೆಗೆ ಜೈನ ಧರ್ಮೀಯರು ಆಗಮಿಸಿ,ಆಕೆಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News