ಆನ್‌ಲೈನ್‌ನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಾತಿ

Update: 2019-05-16 14:56 GMT

ಉಡುಪಿ, ಮೇ 16: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಈ ಶೈಕ್ಷಣಿಕ ವರ್ಷದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 13 ಸಾವಿರ ಮಂದಿ ವಿವಿಯ ವೆಬ್‌ಸೈಟ್‌ಗೆ ಲಾಗಿನ್ ಆಗಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಶಿವಲಿಂಗಯ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್‌ಗಳಿಗೆ 12 ಸಾವಿರ ಮಂದಿ ಪ್ರವೇಶಾತಿ ಪಡೆದಿದ್ದು, ಪ್ರತಿ ಶೈಕ್ಷಣಿಕ ವರ್ಷದಲ್ಲೂ ಜುಲೈ ಮತ್ತು ಜನವರಿಯಲ್ಲಿ ಎರಡು ಬಾರಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಂದು ಹೇಳಿದರು.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಕರಾಮುವಿ ಪ್ರಾದೇಶಿಕ ಕಚೇರಿಗೆ ಸಲ್ಲಿಸಬೇಕು. ಅಂಕಪಟ್ಟಿ ಪರಿಶೀಲನೆ ಬಳಿಕ ಬ್ಯಾಂಕ್ ಚಲನ್ ಪಡೆದು ಶುಲ್ಕ ಪಾವತಿಸಬೇಕು. ಪ್ರವೇಶಾತಿ ಮೇ 6 ರಿಂದ ಪ್ರಾರಂಭವಾಗಿದ್ದು, ಜುಲೈ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿವಿಗೆ ಯುಜಿಸಿ ಮಾನ್ಯತೆ ಲಭಿಸಿರುವುದರಿಂದ ರೆಗ್ಯುಲರ್ ತರಗತಿಗೆ ತೆರಳಿ ಪೆದ ಪದವಿಗೆ ಸಮನಾಗಿದೆ ಎಂದರು.

ಉಡುಪಿ ಬನ್ನಂಜೆಯ ಹಳೆಜಿಪಂ ಕಚೇರಿಯಲ್ಲಿ ಪ್ರಾದೇಶಿಕ ಕಚೇರಿ ಇದ್ದು, ಕುಂಜಿಬೆಟ್ಟು ಎಂಜಿಎಂ ಕಾಲೇಜು, ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಕಾಲೇಜು, ಕಾರ್ಕಳ ಭುವನೇಂದ್ರ ಕಾಲೇಜು, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಲಿಕಾ ಸಹಾಯ ಕೇಂದ್ರಗಳಾಗಿವೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾದೇಶಿಕ ಕಚೇರಿ ನಿರ್ದೇಶಕ ಡಾ.ಮಹಾಲಿಂಗಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News