ಯಾವುದೇ ಹಾವು ಹಾಲು ಕುಡಿಯುವುದಿಲ್ಲ: ಉರಗ ತಜ್ಞ ಸ್ನೇಕ್ ಜಾಯ್

Update: 2019-05-16 15:19 GMT

ಮಂಗಳೂರು, ಮೇ 16: ಯಾವುದೇ ಹಾವುಗಳು ಒಂದುತೊಟ್ಟು ಹಾಲನ್ನೂ ಕುಡಿಯುವುದಿಲ್ಲ. ನಾಗರಪೂಜೆ ಸಮಯ ಸುತ್ತದಲ್ಲಿ ಹಾಲನ್ನು ಸುರಿಯಲಾಗುತ್ತದೆ. ಇಂತಹ ಮೂಢನಂಬಿಕೆಗಳಿಂದ ಜನರು ಹೊರಬರುವುದು ಸೇರಿದಂತೆ ಅಳಿವಿನಂಚಿನಲ್ಲಿರುವ ಹಾವುಗಳನ್ನು ಸಂರಕ್ಷಿಸುವ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ನಗರ ಸಮೀಪದ ಪಕ್ಕಲಡ್ಕ ಯುವಕ ಮಂಡಲ ಡಿವೈಎಫ್‌ಐ ಬಜಾಲ್-ಪಕ್ಕಲಡ್ಕ ಘಟಕದ ಆಶ್ರಯದಲ್ಲಿ ನಡೆಯುವ ಆಟ-ಪಾಠ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರದ ಹಾವಿನ ಬಗೆಗಿನ ಪ್ರಾತ್ಯಕ್ಷಿಕೆಯನ್ನು ಗುರುವಾರ ಖ್ಯಾತ ಉರಗ ತಜ್ಞರಾದ ಸ್ನೇಕ್ ಪಾಪು ಮತ್ತು ಸ್ನೇಕ್ ಜಾಯ್ ನಡೆಸಿಕೊಟ್ಟರು.

ಹಾವುಗಳಿಗೆ ಹಾಲನ್ನು ಎರೆಯುವುದು ಒಂದು ನಂಬಿಕೆ. ಆದರೆ ಮಾನವರ ನಂಬಿಕೆಯೇ ಹಾವುಗಳ ಕುತ್ತಿಗೆಗೆ ಉರುಳಾಗಬಾರದು. ನಾಗರ ಪಂಚಮಿಯಂದು ನಾಗರಹಾವುಗಳ ಹುತ್ತಿಗೆ ಹಾಲನ್ನು ಹಾಕುವುದರಿಂದ ಅವಘಡಗಳೇ ಹೆಚ್ಚು ಸಂಭವಿಸುತ್ತಿವೆ. ಹುತ್ತದ ಮಣ್ಣು ತುಂಬ ತೆಳ್ಳಗಿರುವ ಹಾಗೂ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಹಾಲು ಹುತ್ತದ ಮಣ್ಣಿಗೆ ಸೇರುವುದರಿಂದ ಒಂದು ರೀತಿಯ ವಾಸನೆ ಸಂಯೋಜನೆಗೊಂಡು ಹಾವಿಗೆ ಉಸಿರುಗಟ್ಟುವ ಸಾಧ್ಯತೆಗಳು ಹೆಚ್ಚು ಇರುತ್ತದೆ ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ಆಹಾರ-ನೀರು ಇಲ್ಲದೇ ತಿಂಗಳುಗಳ ಕಾಲ ಹೆಬ್ಬಾವು ತನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಕಾಳಿಂಗ ಸರ್ಪವು ಮೊಟ್ಟೆಗಳನ್ನಿಟ್ಟು, ಆ ಮೊಟ್ಟೆಗಳ ಸುತ್ತ ಬಾಕ್ಸ್ ಆಕಾರದಲ್ಲಿ ತರಗೆಲೆಗಳನ್ನು ಹೊಟ್ಟುತ್ತದೆ. ಮೊಟ್ಟೆಗಳನ್ನು ಯಾವುದೇ ಪ್ರಾಣಿ ಸ್ಪರ್ಶಿಸದಂತೆ ಕಾಯುತ್ತದೆ. ಹೆಣ್ಣು ಕಾಳಿಂಗ ಸುಮಾರು 50-70 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮರಿಗಳು ಹೊರಬರುವರೆಗೂ ಕದಗುವುದಿಲ್ಲ ಎಂದು ಹಾವುಗಳ ಜೀವನಶೈಲಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

ಎಷ್ಟೋ ಬಗೆಯ ಹಾವುಗಳು ಭೂಮಿಯ ಮೇಲಿನಿಂದ ಅಳಿವಿನಂಚಿಗೆ ಸರಿದಿವೆ. ಹಾವುಗಳು ಇಲ್ಲದಿದ್ದರೆ ಪರಿಸರದ ಸಮತೋಲನದ ಕೊಂಡಿ ಕಳಚುತ್ತದೆ. ಪರಿಸರದ ಸಮತೋಲನದಲ್ಲಿ ಒಂದು ಸಣ್ಣ ಕೀಟದ ಪ್ರಾಮಖ್ಯತೆಯೂ ಅಧಿಕವಿದೆ. ಹಾವುಗಳು ಸಾಮಾನ್ಯವಾಗಿ ಮೊಣಕೈಯಿಂದ ಕೆಳಭಾಗ ಹಾಗೂ ಮೊಣಕಾಲಿನಿಂದ ಕೆಳಭಾಗದವರೆಗೆ ಕಚ್ಚುತ್ತವೆ ಎಂದು ಮಾಹಿತಿ ನೀಡಿದರು.

ಮೂರು ತಲೆಯ ಹಾವು, ಏಳು ತಲೆಯ ಹಾವುಗಳಿವೆ ಎನ್ನುವುದು ಅಪ್ಪಟ ಸುಳ್ಳು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಏಳು ತಲೆಯ ಹಾವಿನ ಪೊರೆ ಇರುವ ಚಿತ್ರವೊಂದನ್ನು ಪ್ರಕಟಿಸಲಾಗಿತ್ತು. ಇದು ಕೇವಲ ಟಿಆರ್‌ಪಿ ಅಥವಾ ಯಾವುದೋ ಕಾರಣಕ್ಕಾಗಿ ಅಪ್‌ಲೋಡ್ ಮಾಡಿದ್ದಾರೆ. ಹಾವುಗಳ ಇತಿಹಾಸದಲ್ಲೇ ಏಳು ತಲೆ ಹಾವುಗಳಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಫೋಟೋಶಾಪ್ ಮಾಡಿರುವುದು ಕಾಣುತ್ತದೆ. ಇದು ಕೇವಲ ಪ್ರಚಾರಕ್ಕೆ ಮಾಡಿರುವುದಾಗಿದೆ ಎಂದು ಸ್ನೇಕ್ ಜಾಯ್ ತಿಳಿಸಿದರು.

ಎರಡುತಲೆ ಹಾವು(ಮಣ್ಮುಕ್ಕ ಹಾವು) ಗಳಿಗೆ ಎರಡು ತಲೆಗಳು ಕಾಣುವುದು ಸತ್ಯ. ಆದರೆ ನಿಜವಾಗಿಯೂ ಎರಡು ತಲೆಗಳಿರುವುದಿಲ್ಲ. ಆದರೆ ಬಾಲವು ಸ್ವಲ್ಪ ಪ್ರಮಾಣದಲ್ಲಿ ಸಣ್ಣಗೆ ಇರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅರಿವು ಮೂಡುತ್ತದೆ. ಕೆಲವೊಮ್ಮೆ ಟಿವಿ ವಾಹಿನಿಗಳು ಎಷ್ಟೊಂದು ಕೆಳಮಟ್ಟಕ್ಕಿಳಿಯುತ್ತಾರಂದರೆ, ಮಣ್ಮುಕ್ಕ ಹಾವಿನ ತಲೆ ಇರುವ ಭಾಗವನ್ನು ಕತ್ತರಿಸಿ ಮತ್ತೊಂದನ್ನು ಅಂಟಿಸಿ ಎರಡು ತಲೆಯ ಹಾವೆಂದು ಬಿಂಬಿಸುತ್ತಾರೆ. ಜನರು ಹಾವುಗಳ ಬಗ್ಗೆ ತಿಳಿದುಕೊಂಡರೆ ಮೋಸಕ್ಕೆ ಗುರಿಯಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News