ಸುರತ್ಕಲ್ ಮಲ್ಲಮಾರ್: ಪರಿಶಿಷ್ಟ ಜಾತಿಯ ಮಹಿಳೆಗೆ ಅನ್ಯಾಯ

Update: 2019-05-16 16:03 GMT

ಮಂಗಳೂರು, ಮೇ 16: ಸುರತ್ಕಲ್ ಸಮೀಪದ ಮಲ್ಲಮಾರ್ ಬಳಿ ಸರಕಾರಿ ಜಾಗದಲ್ಲಿ ವಾಸವಾಗಿದ್ದ ಪರಿಶಿಷ್ಟ ಜಾತಿಯ ಕಾವೇರಿ ಎಂಬವರ ಮನೆಯನ್ನು ಗೀತಾ ಹೆಗ್ಡೆ ಮತ್ತಿತರರು ಧ್ವಂಸ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು (ಪರಿವರ್ತನಾ ವಾದ) ಆರೋಪಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಮಿತಿಯ ಸದಸ್ಯ ರಾಜಾರಾಮ್ ಟಿ. ಪೊಲೀಸ್ ಇಲಾಖೆಯು ತಕ್ಷಣ ತಪ್ಪಿತಸ್ಥರನ್ನು ಬಂಧಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೀತಾ ಹೆಗ್ಡೆ ಎಂಬವರು ನ್ಯಾಯಾಲಯದಲ್ಲಿ ದಾವೆ ಹೂಡಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ತಮ್ಮ ಪರವಾಗಿ ತೀರ್ಪು ಬರುವಂತೆ ಮಾಡಿ ಕಾವೇರಿಯವರ ಮನೆಯನ್ನು ಧ್ವಂಸ ಮಾಡಿದ್ದಾರೆ. ಆ ಮನೆ ಸಮುದ್ರ ಪರಂಬೋಕು ಸ್ಥಳದಲ್ಲಿದ್ದು, ಸರಕಾರಿ ಜಾಗವಾಗಿದೆ. ಕಾವೇರಿಯ ಕುಟುಂಬಸ್ಥರು ಪ್ರಸ್ತುತ ಅದೇ ಸ್ಥಳದಲ್ಲಿ ಟರ್ಪಾಲು ಹಾಕಿಕೊಂಡು ವಾಸವಾಗಿದ್ದಾರೆ.ಮನೆ ಧ್ವಂಸ ಮಾಡಿರುವುದರಿಂದ ಸುಮಾರು 25 ಲಕ್ಷ ರೂ. ನಷ್ಟವಾಗಿದೆ. ಅದನ್ನು ಭರಿಸಬೇಕು ಎಂದರು.

ದಲಿತ ಕುಟುಂಬದ ಮೇಲೆ ನಡೆದ ಘಟನೆ ಅಮಾನವೀಯವಾಗಿದೆ. ಮನೆಯನ್ನು ಧ್ವಂಸ ಮಾಡಿದುದಲ್ಲದೆ ಸಾಮಗ್ರಿಗಳಿಗೂ ಹಾನಿಯಾಗಿದೆ. ಆದರೆ ಈವರೆಗೂ ಸ್ಥಳೀಯ ಶಾಸಕರು ಭೇಟಿ ನೀಡುವ ಸೌಜನ್ಯ ತೋರಿಲ್ಲ ಎಂದು ರಾಜಾರಾಮ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಸುಧಾಕರ ಬಿ.ಎಸ್., ನಾಗೇಶ್ ಎಂ.ಕೋಡಿಕಲ್, ದಯಾನಂದ ಅಮೀನ್, ವಿಶ್ವನಾಥ ಚಿತ್ರಾಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News