ಕಮಲ್ ಹಾಸನ್‌ಗೆ ಚಪ್ಪಲಿ ಎಸೆತ: 11 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2019-05-16 16:47 GMT

ಚೆನ್ನೈ, ಮೇ 17: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಮಧುರೈಯಲ್ಲಿ ಬುಧವಾರ ಸಂಜೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಚಪ್ಪಲಿ ಎಸೆದ ಘಟನೆ ನಡೆದಿದೆ. ನಾಥುರಾಮ್ ಗೋಡ್ಸೆಯನ್ನು ಉಲ್ಲೇಖಿಸಿ ‘‘ಭಾರತದ ಮೊದಲ ಭಯೋತ್ಪಾದಕ ಹಿಂದೂ’’ ಎಂಬ ಹೇಳಿಕೆ ನೀಡಿದ ಮೂರು ದಿನಗಳ ಬಳಿಕ ಕಮಲ್ ಹಾಸನ್ ಮೇಲೆ ಈ ದಾಳಿ ನಡೆದಿದೆ.

ಚಪ್ಪಲಿ ಎಸೆತದ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಲಾದ ಪೊಲೀಸ್ ದೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹನುಮಾನ್ ಸೇನೆಯ ಸದಸ್ಯರ ಸಹಿತ 11 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಕಮಲ್ ಹಾಸನ್ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಅವರತ್ತ ಚಪ್ಪಲಿ ಎಸೆಯಲಾಗಿದೆ. ಆದರೆ, ಚಪ್ಪಲಿ ಕಮಲ್ ಹಾಸನ್ ಅವರಿಗೆ ತಾಗಲಿಲ್ಲ. ಬದಲಾಗಿ ಅದು ಜನರ ಮೇಲೆ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಮಲ್ ಹಾಸನ್, “ಮುಸ್ಲಿಂ ಪ್ರಾಬಲ್ಯದ ಪ್ರದೇಶ ಎನ್ನುವ ಕಾರಣಕ್ಕೆ ನಾನು ಈ ಹೇಳಿಕೆ ನೀಡುತ್ತಿಲ್ಲ. ಈ ಹಿಂದೆ ಈ ಹೇಳಿಕೆಯನ್ನು ಮಹಾತ್ಮಾ ಗಾಂಧಿ ಪ್ರತಿಮೆ ಎದುರು ನೀಡಿದ್ದೇನೆ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಇದು ಆರಂಭವಾಗಿದೆ” ಎಂದಿದ್ದರು. ಈ ಹೇಳಿಕೆ ಕುರಿತಂತೆ ಕಮಲ್ ಹಾಸನ್ ವಿರುದ್ಧ ಪೊಲೀಸರು ಅರವಕುರಿಚಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ಭಾಷಣದಲ್ಲಿ ಸತ್ಯವನ್ನೇ ಹೇಳಿದ್ದೇನೆ” ಎಂದು ಕಮಲ್ ಹಾಸನ್ ಬುಧವಾರ ಹೇಳಿದ್ದರು. ಅಲ್ಲದೆ, ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಕಮಲ್ ಹಾಸನ್ ಹೇಳಿಕೆ ಕುರಿತಂತೆ ಅವರ ಪಕ್ಷ ಹೇಳಿಕೆ ಬಿಡುಗಡೆ ಮಾಡಿದ್ದು, ಕಮಲ್ ಹಾಸನ್ ಅವರ ಹೇಳಿಕೆ ತಿರುಚಲಾಗಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News