ಮುಂಗಾರು ವಿಳಂಬ ಸಾಧ್ಯತೆ: ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

Update: 2019-05-16 16:52 GMT

ಉಡುಪಿ, ಮೇ 16: ಉಡುಪಿ ನಗರಸಭೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯಲ್ಲಿ ಸದ್ಯ ಎರಡು ವಾರಗಳಿಗೆ ಬೇಕಾಗುವ ನೀರಿನ ಸಂಗ್ರಹವಿದ್ದು, ಇದೀಗ ಹವಾಮಾನ ಇಲಾಖೆ ಈ ಬಾರಿ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಆರಂಭವಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನೀರಿನ ಪೂರೈಕೆ ಕುರಿತು ಅಧಿಕಾರಿಗಳ ಆತಂಕ ಹೆಚ್ಚಾಗುತ್ತಿದೆ.

ನಗರಕ್ಕೆ ರೇಶನಿಂಗ್ ಪ್ರಕಾರ ಮೇ ಅಂತ್ಯದವರೆಗೆ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹ ಸ್ವರ್ಣ ನದಿಯಲ್ಲಿದ್ದು, ಅದನ್ನು ಜೂನ್ ಮೊದಲ ವಾರದ ವರೆಗೂ ಪೂರೈಕೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇತ್ತ ಮಳೆರಾಯ ಕೈಕೊಟ್ಟರೆ ಮುಂದೆ ಏನು ಮಾಡುವುದು ಎಂಬ ಪರಿಸ್ಥಿತಿ ತಲೆದೋರಿದೆ.

ಸದ್ಯ ಸ್ವರ್ಣ ನದಿಯ ಮಾಣೈ ಎಂಬಲ್ಲಿ ಮಾತ್ರ ಮೂರು ಬೋಟುಗಳಲ್ಲಿ ಡ್ರೆಡ್ಜಿಂಗ್ ಕಾರ್ಯ ನಡೆಸಲಾಗುತ್ತಿದ್ದು, ಮಾಣೈ ಸೇತುವೆಗಿಂತ ಸ್ವಲ್ಪ ಮುಂದೆ, ಭಂಡಾರಿಬೆಟ್ಟು ಹಾಗೂ ಪುತ್ತಿಗೆ ಮಠದ ಬಳಿ ಜೆಸಿಬಿಯಲ್ಲಿ ಕಾಲುವೆಯನ್ನು ನಿರ್ಮಿಸಿ ನೀರು ಹರಿದುಹೋಗುವಂತೆ ಮಾಡಲಾಗಿದೆ.
ನೀರು ಬಜೆ ಅಣೆಕಟ್ಟಿನ ಜಾಕ್‌ವೆಲ್‌ಗೆ ಹರಿದು ಬರುತ್ತಿದ್ದು, ಇಂದು ಬೆಳಗ್ಗೆ 5:30ರಿಂದ ಸಂಜೆಯವರೆಗೂ ನಿರಂತರ ಪಂಪಿಂಗ್ ಕಾರ್ಯ ನಡೆಸಲಾಗು ತ್ತಿದೆ. ಇಂದು ಡ್ರೆಡ್ಜಿಂಗ್ ಕಾರ್ಯ ನಡೆಯುವ ಮಾಣೈಗೆ ಉಡುಪಿ ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಪೌರಾ ಯುಕ್ತ ಆನಂದ ಕಲ್ಲೋಳಿಕರ್, ಇಂಜಿನಿಯರ್ ಗಣೇಶ್ ಮೊದಲಾದವು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ನಗರಸಭೆಯ ಮೂರನೆ ವಿಭಾಗಕ್ಕೆ ನೀರು ಪೂರೈಕೆ ಮಾಡ ಲಾಗಿದ್ದು, ನೀರು ಬಾರದ ಸುಬ್ರಹ್ಮಣ್ಯ ನಗರ ಹಾಗೂ ತ್ರಿಶಂಕು ನಗರಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದೆ. ಉಳಿದಂತೆ ಬೇರೆ ಕಡೆಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನಾಲ್ಕನೆ ವಿಭಾಗಕ್ಕೆ ನೀರು

ಉಡುಪಿ ನಗರಸಭೆಯ ನಾಲ್ಕನೆ ವಿಭಾಗದ ಅನಂತನಗರ ಒಂದು ಮತ್ತು ಎರಡನೆ ಸ್ಟೇಜ್, ಹುಡ್ಕೊ, ಎಂಐಟಿ, ಎಲ್‌ಐಜಿ, ಇಂಡಸ್ಟ್ರೀಯಲ್ ಏರಿಯಾ, ಮಂಚಿ ಕುಮೇರಿ, ಮಂಚಿ ದುಗ್ಲಿ, ಮಂಜುಶ್ರೀ ನಗರ, ಮಂಚಿ ಕೋಡಿ, ದುರ್ಗಾ ನಗರ, ಅನಂತ ಕಲ್ಯಾಣ ನಗರ, ಇಂದಿರಾ ನಗರ, ಕುಕ್ಕಿಕಟ್ಟೆ, ಕಸ್ತೂರ್ಬಾ ನಗರ, ಬೈಲೂರು, ಮಹಿಷ ಮರ್ದಿನಿ ನಗರ, ವಾಸುಕೀನಗರ, ಬಲಾಯಿಪಾದೆ, ಮಂಚಿ ಮೂಲಸ್ಥಾನ ರಸ್ತೆ, ಚಿಟ್ಪಾಡಿ, ಡಿಸಿಎಂ ಕಾಲೋನಿ, ಪಣಿಯಾಡಿ, ಶಾರದಾ ಮಂಟಪ, ಎಂಜಿಎಂ, ಒಕುಡೆ ಓಣಿ, ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗ, ಪರ್ಕಳ, ಸಣ್ಣಕ್ಕೀಬೆಟ್ಟು, ಹೆರ್ಗ, ಗ್ಯಾಟ್‌ಸನ್ ಕಾಲೋನಿ, ಸಟ್ಟಿಬೆಟ್ಟು, ಹೆರ್ಗ ದೇವಸ್ಥಾನ ರಸ್ತೆ, ದೇವಿನಗರ, ಮಂಜುನಾಥ ನಗರ, ಪರೀಕ ರಸ್ತೆ, ಪರ್ಕಳ ಹೈಸ್ಕೂಲ್‌ವರೆಗೆ, ತ್ರಿಶಂಕು ನಗರ, ಪವಿತ್ರ ನಗರಗಳಿಗೆ ಮೇ 17ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News