ಶಾರ್ಟ್ ಸರ್ಕಿಟ್‍ನಿಂದ ಮನೆಗೆ ಬೆಂಕಿ: ಮನೆ ಸಹಿತ 7 ಲಕ್ಷ ರೂ. ಮೌಲ್ಯದ ಅಡಿಕೆ ನಾಶ

Update: 2019-05-16 17:13 GMT

ಬಂಟ್ವಾಳ, ಮೇ 16: ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಕಾಣಿಸಿಕೊಂಡು ಮನೆ ಭಾಗಶಃ ಹಾನಿಗೊಂಡಿದ್ದು, ಅಂದಾಜು ಏಳು ಲಕ್ಷ ರೂ. ಮೌಲ್ಯದ ಅಡಿಕೆಗಳು ಸುಟ್ಟು ಕರಲಾದ ಘಟನೆ ವಿಟ್ಲದ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿ ಗುರುವಾರ ಸಂಭವಿಸಿದೆ.

ಕೆಲಿಂಜ ನಿವಾಸಿ ಜೂಲಿಯಾನ್ ಪಾಯಸ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಅವಘಡ ನಡೆದಿದೆ. ಬುಧವಾರ ಮಧ್ಯರಾತ್ರಿ ಮನೆಯ ಒಳಗಡೆ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಹಂಚಿನ ಛಾವಣಿಯಲ್ಲಿ ಒಣಗಿಸಲು ಇಟ್ಟಿದ್ದ ಅಡಿಕೆಗಳು ಸುಟ್ಟು ಕರಕಲಾಗಿದೆ. ಹಂಚಿನ ಭಾಗದ ನಾಲ್ಕು ಕೋಣೆಗಳಿಗೂ ಬೆಂಕಿ ಆವರಿಸಿಕೊಂಡು ವಸ್ತುಗಳು ಭಸ್ಮವಾಗಿದೆ. 

ಬೆಳಿಗ್ಗೆ 5 ಗಂಟೆ ವೇಳೆ ಮನೆಯವರಿಗೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಮನೆಮಂದಿ ಎಲ್ಲಾ ಬೆಂಕಿ ನಂದಿಸಲು ಮುಂದಾಗಿದ್ದು, ಈ ಸಂದರ್ಭ ಇಬ್ಬರು ಗಾಯಗೊಂಡಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿದಂತೆ ಅನಿಲ ಸಿಲಿಂಡರ್‍ಗಳನ್ನು ಹೊರಗಡೆ ಎಸೆಲಾಗಿದೆ. ಅಷ್ಟೊತ್ತಿಗೆ ಮನೆಯ ಪಕ್ಕಾಸು, ಅದರ ಮುಚ್ಚಿಗೆ, ಚಯರ್‍ಗಳು, ಫ್ಯಾನ್, ಕಪಾಟು, ಸೇರಿದಂತೆ ಮನೆಯ ವೈಯರಿಂದ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಎರಡು ವರ್ಷಗಳ ಕಾಲ ಇಟ್ಟಿದ್ದ ಅಂದಾಜು ಏಳು ಲಕ್ಷ ರೂ. ಮೌಲ್ಯದ ಅಡಿಕೆ ರಾಶಿಗೆ ಬೆಂಕಿ ತಗಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಘಟನೆಯಿಂದ ಒಟ್ಟು ಅಂದಾಜು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News