ಜಕ್ರಿಬೆಟ್ಟು ಜಾಕ್‍ವೆಲ್‍ಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ- ಪರಿಶೀಲನೆ

Update: 2019-05-16 17:35 GMT

ಬಂಟ್ವಾಳ, ಮೇ 16: ಇಲ್ಲಿನ ಪುರಸಭೆ ವ್ಯಾಪ್ತಿಯ ಜನರಿಗೆ ನೀರು ಒದಗಿಸುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ನದಿಯಲ್ಲಿ ನೀರಿಲ್ಲದೆ ಬರಿದಾಗಿದ್ದು, ಗುರುವಾರ ಬೆಳಿಗ್ಗೆಯಿಂದ ಪುರಸಭಾ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಕೆಯಿಲ್ಲದೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಜಕ್ರಿಬೆಟ್ಟು ಜಾಕ್‍ವೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೇತ್ರಾವತಿ ನದಿ ಮಧ್ಯೆ ಇರುವ ಇಂಟರ್‍ವೆಲ್ ವೀಕ್ಷಿಸಿದ ಶಾಸಕರು ಕ.ನ.ನೀ.ಸ.ಒ.ಮಂಡಳಿಯ ಇಂಜಿನಿಯರ್ ಶೋಭಾಲಕ್ಷ್ಮಿ ಹಾಗೂ ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರ ಜೊತೆ ಮಾತುಕತೆ ನಡೆಸಿ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ನದಿಯಲ್ಲಿ ನೀರಿನ ಮಟ್ಟ ಕುಸಿದ ಕಾರಣ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ಮೂಲಕ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಹಳೆ ಜಾಕ್‍ವೆಲ್ ಬಳಿ ನದಿಯಲ್ಲಿ ನೀರಿರುವ ಬಗ್ಗೆ ಮಾಹಿತಿ ಇದ್ದು, ಜನರಿಗೆ  ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.

ಈ ಸಂದರ್ಭ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ಭಾಸ್ಕರ್ ಟೈಲರ್, ಇಂಜಿನಿಯರ್ ತೇಜೋಮೂರ್ತಿ ಪ್ರಮುಖರಾದ ಸುದರ್ಶನ ಬಜ ಮೊದಲಾದವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News