ಮೇ 20: ಬೊರಿಮಾರ್ ಚರ್ಚ್ ಗೆ ಕರ್ನಾಟಕದ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಭೇಟಿ

Update: 2019-05-16 17:39 GMT

ವಿಟ್ಲ : 125 ವರ್ಷಗಳನ್ನು ಪೂರೈಸಿ ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ಇದೀಗ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಕರ್ನಾಟಕದ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊರವರು ಮೇ 20 ರಂದು ಬೊರಿಮಾರ್ ಚರ್ಚ್ ಗೆ ಭೇಟಿ ನೀಡಿ “ಕಮ್ಯುನಿಯನ್ ಡೇ” ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಮಕ್ಕಳಾದ ಐಶಲ್ ಮಾರ್ಟಿಸ್, ಲೆನೊರಾ ಸಾನ್ಸಿಯಾ ಪಿಂಟೊ, ನತಾಶ ಮೆಂಡೊನ್ಸಾ, ಒಲಿಶಾ ನೊರೊನ್ಹಾ, ರಿಯೋನ್ ಪಾವ್ಲ್ ಮಾರ್ಟಿಸ್ ಹಾಗೂ ಶರುನ್ ರೊಡ್ರಿಗಸ್ ರವರಿಗೆ ಪ್ರಪ್ರಥಮ ಬಾರಿಗೆ ಪರಮ ಪ್ರಸಾದ ನೀಡಲಿರುವರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ಲಾರೆನ್ಸ್ ಮುಕ್ಕುಝಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ವರ್ಗೀಸ್ ಮಾರ್ ಮಕಾರಿಯೋಸ್ ಸೇರಿದಂತೆ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳ ಧರ್ಮಗುರುಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಆರ್ಚ್ ಬಿಷಪ್ ಅತ್ಯಂತ ಮೇಲು ಹುದ್ದೆಯಾಗಿದ್ದು ಇವರು ಚರ್ಚ್ ಗಳಿಗೆ ಭೇಟಿ ನೀಡುವುದು ತೀರಾ ಅಪರೂಪ. ಈ ನಿಟ್ಟಿನಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ವಿವಿಧ ಹಂತಗಳ ಅನುಷ್ಠಾನದಲ್ಲಿರುವ ಬೊರಿಮಾರ್ ಚರ್ಚ್ ಗೆ ಆರ್ಚ್ ಬಿಷಪ್ ಡಾ. ಮಚಾದೊರವರು ಭೇಟಿ ನೀಡುತ್ತಿರುವುದು ಐತಿಹಾಸಿಕ ದಾಖಲೆ ಮತ್ತು ಮಹತ್ವ ಪಡೆದುಕೊಂಡಿದೆ ಎಂದು ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಗ್ರೆಗರಿ ಪಿರೇರಾ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News