ಮೇ 30ರವರೆಗೆ ಭಾರತೀಯ ವಿಮಾನಗಳಿಗೆ ಪಾಕ್ ವಾಯುಪ್ರದೇಶ ನಿಷೇಧ

Update: 2019-05-16 17:45 GMT

ಲಾಹೋರ್, ಮೇ 16: ಭಾರತೀಯ ವಿಮಾನಗಳು ತನ್ನ ವಾಯುಪ್ರದೇಶ ಪ್ರವೇಶಿಸುವುದರ ಮೇಲೆ ವಿಧಿಸಲಾಗಿರುವ ನಿಷೇಧವು ಮೇ 30ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪಾಕಿಸ್ತಾನ ಬುಧವಾರ ತಿಳಿಸಿದೆ.

ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪಾಕಿಸ್ತಾನ ಈಗ ಎದುರುನೋಡುತ್ತಿದೆ. ಭಾರತೀಯ ವಾಯುಪಡೆಯು ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿನ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ ಬಳಿಕ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ.ಆದಾಗ್ಯೂ, ಬ್ಯಾಂಕಾಕ್ ಮತ್ತು ಕೌಲಾಲಂಪುರಕ್ಕೆ ಹೋಗುವ ವಿಮಾನಗಳನ್ನು ಹೊರತುಪಡಿಸಿ, ಇತರ ಎಲ್ಲ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮಾರ್ಚ್ 27ರಂದು ತೆರೆದಿದೆ.

''ಭಾರತೀಯ ವಿಮಾನಗಳಿಗೆ ಪಾಕಿಸ್ತಾನಿ ವಾಯುಪ್ರದೇಶವನ್ನು ತೆರೆಯುವ ಬಗ್ಗೆ ಚರ್ಚಿಸಲು ರಕ್ಷಣಾ ಮತ್ತು ವಾಯುಯಾನ ಸಚಿವಾಲಯಗಳ ಉನ್ನತ ಅಧಿಕಾರಿಗಳು ಬುಧವಾರ ಸಭೆಯೊಂದನ್ನು ನಡೆಸಿದರು. ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶವು ಮೇ 30ರವರೆಗೆ ನಿಷೇಧಿತವಾಗಿಯೇ ಮುಂದುವರಿಯುವುದು ಎಂಬ ನಿರ್ಧಾರವನ್ನು ಅವರು ತೆಗೆದುಕೊಂಡರು'' ಎಂದು ಸಭೆಯ ಬಳಿಕ ಪಿಟಿಐ ಸುದ್ದಿ ಸಂಸ್ಥೆಗೆ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News