‘ನಾವು ತಾಲಿಬಾನ್ ಆಗಿ ಬಿಡುತ್ತೇವೆ’: ಗೋಡ್ಸೆ ಬಗ್ಗೆ ಪ್ರಜ್ಞಾ ಹೇಳಿಕೆಗೆ ಆನಂದ್ ಮಹೀಂದ್ರ ಪ್ರತಿಕ್ರಿಯೆ

Update: 2019-05-17 07:14 GMT

ಹೊಸದಿಲ್ಲಿ, ಮೇ 17: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು ‘ಸ್ವತಂತ್ರ ಭಾರತದ ಮೊದಲ ಉಗ್ರವಾದಿ’ ಎಂದು ಇತ್ತೀಚೆಗೆ ನಟ-ರಾಜಕಾರಣಿ ಕಮಲ್ ಹಾಸನ್ ಬಣ್ಣಿಸಿ ಸುದ್ದಿಯಾಗಿದ್ದರೆ, ಅದರ ಬೆನ್ನಿಗೇ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್ ಪ್ರತಿಕ್ರಿಯಿಸಿ ನಾಥೂರಾಂ ಗೋಡ್ಸೆ ಒಬ್ಬ ‘ದೇಶಭಕ್ತ' ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಪ್ರಜ್ಞಾ ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿರುವುದು ಬೇರೆ ವಿಚಾರ.

ಈ ನಡುವೆ ಕೈಗಾರಿಕೋದ್ಯಮಿ ಹಾಗೂ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕೆಲ ವಿಷಯಗಳು ಚರ್ಚಾತೀತವಾಗಿರಬೇಕು ಎಂದು ಹೇಳಿದ್ದಾರೆ.

“75 ವರ್ಷಗಳ ತನಕ ಭಾರತವು ಮಹಾತ್ಮ ಅವರ ಭೂಮಿಯಾಗಿದೆ. ಜಗತ್ತು ತನ್ನ ನೈತಿಕತೆಯನ್ನು ಕಳೆದುಕೊಂಡಾಗ ಅವರು ಭರವಸೆಯ ಬೆಳಕಾಗಿ ಮೂಡಿದ್ದರು. ಬಡವರಾಗಿದ್ದಕ್ಕೆ ನಮ್ಮ ಬಗ್ಗೆ ಪರಿತಾಪ ಪಡಲಾಗುತ್ತಿತ್ತು, ಆದರೆ ಜಗತ್ತಿನಾದ್ಯಂತ ಬಿಲಿಯಗಟ್ಟಲೆ ಜನರಿಗೆ ಸ್ಫೂರ್ತಿಯಾದ ಬಾಪು ಅವರಿದ್ದಂದಿನಿಂದ ನಾವು ಯಾವತ್ತೂ ಶ್ರೀಮಂತರು. ಕೆಲ ವಿಚಾರಗಳು ಯಾವತ್ತೂ ಪವಿತ್ರವಾಗಿರಬೇಕು. ಇಲ್ಲದೇ ಹೋದರೆ ನಮ್ಮನ್ನು ರಕ್ಷಿಸುತ್ತಿದ್ದ ಪ್ರತಿಮೆಗಳನ್ನು ನಾಶಗೊಳಿಸುತ್ತಾ ನಾವು ತಾಲಿಬಾನ್ ಆಗಿ ಬಿಡುತ್ತೇವೆ'' ಎಂದು ಮಾರ್ಮಿಕವಾಗಿ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಹಲವಾರು ಟ್ವಿಟ್ಟರಿಗರು ಅವರ ಭಾವನೆಗಳನ್ನು ಸಮರ್ಥಿಸಿಕೊಂಡಿದ್ದರೆ, ಈಗಿನ ಸನ್ನಿವೇಶವನ್ನು ನಾಜೂಕಾಗಿ ಅವರು ವಿವರಿಸಿದ ಪರಿಯೂ ಪ್ರಶಂಸೆಗೊಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News