ಬಂಟ್ವಾಳದಲ್ಲಿ ಜಲಕ್ಷಾಮ: ನೀರಿನ ರೇಶನಿಂಗ್ ಆರಂಭ

Update: 2019-05-17 10:20 GMT

ಬಂಟ್ವಾಳ, ಮೇ 16: ಬಾರದ ಮುಂಗಾರು ಪೂರ್ವ ಮಳೆ ಹಾಗೂ ಬಿರು ಬಿಸಿಲಿಗೆ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಕ್ರಿಬೆಟ್ಟು ಜಾಕ್‌ವೆಲ್‌ನ ನದಿತಟದಲ್ಲಿ ನೀರು ಭಾಗಶಃ ಬತ್ತಿ ಹೋಗಿದೆ. ಇದರಿಂದ ಪುರಸಭಾ ವ್ಯಾಪ್ತಿಯ ಜನರಿಗೆ ನೀರಿನ ಅಭಾವ ಕಾಡಲಾರಂಭಿಸಿದೆ.

ಪುರಸಭಾ ವ್ಯಾಪ್ತಿಯ ಜನರಿಗೆ ನೀರು ಸರಬರಾಜು ಮಾಡುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್ ಜಕ್ರಿಬೆಟ್ಟು ನದಿ ಕಿನಾರೆಯಲ್ಲಿದ್ದು, ಈ ಪ್ರದೇಶದಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ.

ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿರುವು ದರಿಂದ ಮೇ 17ರಿಂದ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ನಿರ್ಧಾರವನ್ನು ಪುರಸಭೆ ಪ್ರಕಟಿಸಿದೆ.

ಇದುವರೆಗೆ ಮಂಗಳೂರು ಸಹಿತ ದ.ಕ. ಜಿಲ್ಲೆಯ ಬೇರೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ರೇಶನಿಂಗ್ ಆರಂಭಗೊಂಡಿರಲಿಲ್ಲ. ಆದರೆ, ನೇತ್ರಾವತಿ ನದಿ ಪೂರ್ಣ ಬತ್ತಿ ಹೋಗಿರುವ ಕಾರಣ ಪುರಸಭೆ ಈ ಕ್ರಮಕ್ಕೆ ಮುಂದಾಗಿದೆ.

ಜಾಕ್‌ವೆಲ್‌ಗೆ ನೀರು ಸರಬರಾಜಾಗುತ್ತಿಲ್ಲ:

ಜಕ್ರಿಬೆಟ್ಟುವಿನಲ್ಲಿರುವ ಜಾಕ್‌ವೆಲ್‌ಗೆ ನೇತ್ರಾವತಿ ನದಿ ಮಧ್ಯದಲ್ಲಿರುವ ಎರಡು ಇಂಟರ್‌ವೆಲ್‌ಗಳಿಂದ ನೀರು ಪೂರೈಕೆಯಾಗುತ್ತದೆ. ನೇತ್ರಾವತಿ ನದಿಯಲ್ಲಿ ಸಂಗ್ರಹವಿರುವ ನೀು ಸ್ಟೈನರ್ ಮೂಲಕ ಇಂಟರ್‌ವೆಲ್‌ಗೆ ಸರಬರಾಜಾಗುತ್ತದೆ. ಆದರೆ, ಎರಡು ಇಂಟರ್‌ವೆಲ್‌ಗಳ ಪೈಕಿ ಒಂದು ಈಗಾಗಲೇ ನೀರಿಲ್ಲದೆ ಬರಿದಾಗಿದ್ದು, ಇನ್ನೊಂದು ಇಂಟರ್‌ವೆಲ್‌ನ ಸ್ಟೈನರ್ ಅರ್ಧ ಮಾತ್ರ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಜಾಕ್‌ವೆಲ್‌ಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

‘‘ನೀರಿರುವ ಭಾಗದ ಇಂಟರ್‌ವೆಲ್ ಸ್ಟೈನರ್‌ನ ಸುತ್ತಮುತ್ತದ ಹೂಳು ಹಾಗೂ ಮರಳು ತೆಗೆಯುವ ಕಾರ್ಯ ಗುರವಾರ ಬೆಳಗ್ಗಿ ನಿಂದಲೇ ಆರಂಭಗೊಂಡಿದೆ. ಗುರುವಾರ ಬೆಳಗ್ಗೆ 7:30ರವರೆಗೆ ಪುರಸಭೆ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಸಲಾಗಿದೆ. ಆ ಬಳಿಕ ಇಂಟರ್‌ವೆಲ್ ಒಣಗಿದ್ದು, ನೀರು ಸರಬರಾಜು ಸ್ಥಗಿತಗೊಂಡಿದೆ. ಇದೀಗ ಹಳೆಯ ಜಾಕ್‌ವೆಲ್‌ನ್ ಪಂಪ್ ಸರಿಪಡಿಸಿ, ಲೀಕೆಜ್ ದುರಸ್ತಿಪಡಿಸಿ ನಾಗರಿಕರಿಗೆ ರೇಷನಿಂಗ್ ವ್ಯವಸ್ಥೆಯಡಿ ನೀರು ಪೂರೈಸಲು ಪುರಸಭೆ ನಿರ್ಧರಿಸಿದೆ. ಕೆಲವು ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು’’ ಎಂದು ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ತಿಳಿಸಿದ್ದಾರೆ.

ಏನಿದು ಸ.ಕು.ನೀ.ಯೋಜನೆ?:

ಮುಂದಿನ 30 ವರ್ಷಗಳವರೆಗಿನ ಜನಸಂಖ್ಯೆಯನ್ನು ಆಧರಿಸಿ, ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿ 51 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಅಂದಿನ ಸಚಿವ ಬಿ. ರಮಾನಾಥ ರೈ ಅನುಷ್ಠಾನಗೊಳಿಸಿದ್ದರು. ದಿನವೊಂದಕ್ಕೆ ಒಟ್ಟು 42 ಲಕ್ಷ ಲೀಟರ್ ಕುಡಿಯುವ ನೀರು ಸಂಗ್ರಹಿಸಲಾಗುತ್ತಿದ್ದು, ನೇತ್ರಾವತಿ ನದಿ ತೀರದಲ್ಲಿ ಇಂಟೆಕ್ ವೆಲ್, ಜಾಕ್‌ವೆಲ್, ಕನೆಕ್ಟಿಂಗ್ ಪೈಪ್‌ಲೈನ್ ಅಳವಡಿಸಲಾಗಿದೆ. ಜಕ್ರಿಬೆಟ್ಟುವಿನಲ್ಲಿ ಜಲಶುದ್ಧೀಕರಣ ಘಟಕ ಮತ್ತು ರೇಚಕ ಸ್ಥಾವರ ನಿರ್ಮಿಸಲಾಗಿದ್ದು, ಕಾಮಾಜೆ, ಕುರ್ಸುಗುಡ್ಡೆ, ಮೈರಾನ್‌ಪಾದೆ, ಉಪ್ಪುಗುಡ್ಡೆ, ಶಾಂತಿಗುಡ್ಡೆ, ಲೊರೆಟ್ಟಪದವು, ಗೂಡಿನಬಳಿ ಸಹಿತ ಒಟ್ಟು 7 ಕಡೆಗಳಲ್ಲಿ ನೀರಿನ ಟ್ಯಾಂಕ್ ಮೂಲಕ ಬಂಟ್ವಾಳ ಪಟ್ಟಣಕ್ಕೆ ನೀರು ಪೂರೈಕೆ ಕಾರ್ಯ ನಡೆಯುತ್ತಿದೆ.

ನೇತ್ರಾವತಿ ಒಡಲು ಪೂರ್ತಿ ಹೂಳು

ಕಳೆದ ಮಳೆಗಾಲದಲ್ಲಿ ಜಿಲ್ಲೆಯ ವಿವಿಧೆಡೆ ಉಂಟಾದ ಭೂಕುಸಿತ ಪರಿಣಾಮವಾಗಿ ನೇತ್ರಾವತಿ ನದಿಯ ಒಡಲು ಪೂರ್ತಿ ಕೆಸರು, ಮಣ್ಣು, ಮರಳು ತುಂಬಿದೆ. ಕಳೆದ ಮಳೆಗಾಲದಲ್ಲಿ ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಮಣ್ಣು ಮಿಶ್ರಿತ ಕೆಂಪು ನೀರು ನದಿಯಲ್ಲಿ ಉಕ್ಕಿ ಹರಿದಿತ್ತು. ಪರಿಣಾಮ ನದಿಯ ಒಡಲಲ್ಲಿ ಮರಳು ಮತ್ತು ಮಣ್ಣು ತುಂಬಿಕೊಂಡಿದೆ. ಇದರಿಂದ ನದಿ ಪಾತ್ರ ಮೇಲಕ್ಕೆ ಬಂದಿದ್ದು, ಮುಂದೆ ಮಳೆಗಾಲದಲ್ಲಿ ನದಿ ಮತ್ತೆ ಉಕ್ಕಿ ಹರಿದರೆ ಸುತ್ತಲ ಪ್ರದೇಶದಲ್ಲಿ ನೆರೆ ಉಂಟಾಗಬಹುದು ಎಂಬ ಭೀತಿ ಉಂಟಾಗಿದೆ.

ಜಕ್ರಿಬೆಟ್ಟು ನದಿ ಕಿನಾರೆ ಬಳಿಯಿರುವ ಜಾಕ್‌ವೆಲ್ ಪ್ರದೇಶದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ನದಿ ನೀರಿನ ಹರಿವು ನಿಂತು ಹೋಗಿದೆ. ಈ ನಿಟ್ಟಿನಲ್ಲಿ ಮೇ 17ರಿಂದ 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು. ನಿಯಮಿತ ನೀರಿನ ಬಳಕೆಗಾಗಿ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕು.

ನೇಬಲ್ ಡಿಸೋಜ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ

ತುಂಬೆ ಡ್ಯಾಂ ಪ್ರದೇಶ ಸಹಿತ ನೇತ್ರಾವತಿ ನದಿತಟದಲ್ಲಿ ಹೂಳು ತೆಗೆಯುವ ಕೆಲಸ ಇದುವರೆಗೆ ನಡೆದಿಲ್ಲ. ಪರಿಣಾಮ ಹೂಳು ಹೆಚ್ಚಾಗಿ ನೀರು ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ನೈಜ ಮಟ್ಟ ತಿಳಿಯಲು ಅಸಾಧ್ಯವಾಗಿದೆ. ಸದ್ಯ ಬೇಸಿಗೆ ಮುಗಿಯುತ್ತಾ ಬಂದರೂ ಹೂಳು ತೆಗೆಯುವ ಕೆಲಸ ಇನ್ನೂ ಆರಂಭವಾಗಿಲ್ಲ. ಇದರಿಂದ ನೀರಿನ ಮಟ್ಟ ಕುಸಿದಿದೆ.

ಮುನೀಶ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News