ಹೊಸ ಪುಸ್ತಕದಲ್ಲಿ ಅನಾವರಣಗೊಂಡ ದಾವೂದ್-ಮ್ಯಾಚ್ ಫಿಕ್ಸಿಂಗ್ ನಂಟು

Update: 2019-05-17 16:31 GMT

ಹೊಸದಿಲ್ಲಿ,ಮೇ.17: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಲಿಗೆ ಮ್ಯಾಚ್‌ಫಿಕ್ಸಿಂಗ್ ಒಂದು ಶುದ್ಧಹಸ್ತದ ವ್ಯವಹಾರವಾಗಿತ್ತು. ಯಾಕೆಂದರೆ ಈ ವ್ಯವಹಾರದಲ್ಲಿ ಯಾರನ್ನು ಬೆದರಿಸುವ ಅಥವಾ ಕೊಲೆ ಮಾಡುವ ಅಗತ್ಯವಿರಲಿಲ್ಲ. ಕೇವಲ ಕೆಲವು ಆಟಗಾರರನ್ನು ಅತ್ತ-ಇತ್ತ ಮಾಡಬೇಕಿತ್ತು ಮತ್ತು ಹಣವನ್ನು ಹಂಚಬೇಕಿತ್ತು ಎಷ್ಟೇ ಎಂದು ಈ ಕುರಿತು ಹೊರಬಂದಿರುವ ಹೊಸಪುಸ್ತಕದಲ್ಲಿ ಲೇಖಕರು ತಿಳಿಸಿದ್ದಾರೆ.

‘ನೋ ಬಾಲ್:ದಿ ಮುರ್ಕಿ ವರ್ಲ್ಡ್ ಆಫ್ ಮ್ಯಾಚ್ ಫಿಕ್ಸಿಂಗ್‌’ನ ಲೇಖಕ ಚಂದ್ರಮೋಹನ್ ಪುಪ್ಪಲ ಈ ಪುಸ್ತಕದಲ್ಲಿ ಮ್ಯಾಚ್ ಫಿಕ್ಸಿಂಗ್‌ ಮತ್ತು ದಾವೂದ್ ಇಬ್ರಾಹಿಂ ನಡುವಿನ ನಂಟಿನ ಬಗ್ಗೆ ಉಲ್ಲೇಖಿಸಿದ್ದಾರೆ. ಪೊಲೀಸರು ದಾಖಲಿಸಿರುವ ಸಂಭಾಷಣೆಗಳು ಮತ್ತು ಭಾರತದ ದೊಡ್ಡ ಹೆಸರುಗಳೂ ಸೇರಿದಂತೆ ಈ ದಂಧೆಯಲ್ಲಿದ್ದ ಪ್ರಮುಖ ಆಟಗಾರರ ಬಗ್ಗೆ ವರದಿಯಾಗದ ಮಾಹಿತಿಗಳ ಆಧಾರದಲ್ಲಿ ಬರೆಯಲಾಗಿರುವ ಈ ಪುಸ್ತಕ ಭಾರತೀಯ ಕ್ರಿಕೆಟ್‌ನ ಹೃದಯದಲ್ಲಿರುವ ಕೊಳಕಿನ ಬಗ್ಗೆ ಮಾತನಾಡುತ್ತದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ನಡೆಯುವ ಬಗ್ಗೆ 90ರ ದಶಕದಲ್ಲೇ ಜನಸಮಾನ್ಯರಿಗೆ ತಿಳಿದಿತ್ತು. ಪೊಲೀಸರಿಗಂತೂ ಇಂಥದ್ದೊಂದು ದಂಧೆ ನಡೆಯುತ್ತಿರುವ ಬಗ್ಗೆ ಮೊದಲೇ ತಿಳಿದಿತ್ತು ಮತ್ತು ಆಗೊಮ್ಮೆ ಈಗೊಮ್ಮೆ ದಾಳಿಗಳು ಮತ್ತು ಬಂಧನಗಳು ನಡೆಯುತ್ತಿದ್ದವು. ಆದರೆ ಇವುಗಳು ಪತ್ರಿಕೆಗಳ ಮೂಲೆಯಲ್ಲಿ ಸಣ್ಣ ಸುದ್ದಿಗಳಾಗಿ ವರದಿಯಾಗುತ್ತಿದ್ದವು ಎಂದು ಲೇಖಕರು ತಿಳಿಸುತ್ತಾರೆ.

ಆದರೆ 2000ನೇ ಇಸವಿಯಲ್ಲಿ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಮತ್ತು ಅಜಯ್ ಜಡೇಜಾ ಕ್ರಿಕೆಟ್ ಜೀವನ ಬೆಟ್ಟಿಂಗ್‌ನಿಂದ ಕೊನೆಯಾದಾಗ ಅದು ಪತ್ರಿಕೆಗಳ ಮುಖಪುಟದ ವಿಷಯವಾಯಿತು ಎಂದು ಲೇಖಕರು ಈ ಪುಸ್ತಕದಲ್ಲಿ ಬರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News