×
Ad

ದಲಿತರು ದೌರ್ಜನ್ಯವನ್ನು ದೀರ್ಘಕಾಲ ಸಹಿಸಲ್ಲ

Update: 2019-05-17 22:16 IST

ಅಹ್ಮದಾಬಾದ್, ಮೇ 17: ದಲಿತರ ವಿವಾಹ ಮೆರವಣಿಗೆಯನ್ನು ಮೇಲ್ವರ್ಗದವರು ತಡೆದ ಇತ್ತೀಚೆಗಿನ ಘಟನೆಗೆ ಸಂಬಂಧಿಸಿ ಗುಜರಾತ್‌ನ ಬಿಜೆಪಿ ಸರಕಾರವನ್ನು ಟೀಕಿಸಿರುವ ಭೀಮ್ ಸೇನೆಯ ಸ್ಥಾಪಕ ಚಂದ್ರಶೇಖರ್ ಆಝಾದ್, ಇಂತಹ ದೌರ್ಜನ್ಯವನ್ನು ದೀರ್ಘಕಾಲ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ‘‘ಗುಜರಾತ್‌ನಲ್ಲಿ ಇತ್ತೀಚೆಗೆ ದಲಿತ ದೌರ್ಜನ್ಯದ ಹಲವು ಘಟನೆಗಳು ಸಂಭವಿಸಿರುವುದರಿಂದ ನಾನು ಇಲ್ಲಿಗೆ ಆಗಮಿಸಿದ್ದೇನೆ. ಗುಜರಾತ್‌ನಲ್ಲಿ ಸಂವಿಧಾನದ ನಿಯಮಗಳನ್ನು ಅನ್ವಯಿಸುತ್ತಿರುವಂತೆ ಕಾಣುತ್ತಿಲ್ಲ. ದೌರ್ಜನ್ಯದಿಂದ ಎಲ್ಲ ಜನರಿಗೆ ರಕ್ಷಣೆ ನೀಡುವ ಸಂವಿಧಾನ ಕಲಂ 15ನ್ನು ಗುಜರಾತ್ ಸರಕಾರ ತೆಗೆದು ಹಾಕಿದೆ’’ ಎಂದು ಆಝಾದ್ ಹೇಳಿದ್ದಾರೆ. ಗುಜರಾತ್‌ನಲ್ಲಿ ದಲಿತರ ವಿವಾಹದ ಮೆರವಣಿಗೆಗೆ ತಡೆ ಒಡ್ಡುವುದು ಮಾತ್ರವಲ್ಲ, ದಲಿತರು ಮೀಸೆ ಬೆಳೆಸಿದರೆ, ತಮ್ಮ ಹೆಸರಿನ ಮುಂದೆ ಸಿನ್ಹಾ ಎಂದು ಸೇರಿದರೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

‘‘ಇಲ್ಲಿ ದಲಿತರಿಗೆ ಈಗಲೂ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಇದು ಜಂಗಲ್ ರಾಜ್ ಅಲ್ಲದೆ ಬೇರೇನೂ ಅಲ್ಲ. ಈ ಅವಮಾನವನ್ನು ದಲಿತರು ದೀರ್ಘಕಾಲ ಸಹಿಸಲಾರರು ಎಂದು ಸರಕಾರಕ್ಕೆ ತಿಳಿಸಲು ಹಾಗೂ ಸರಕಾರ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದರು. “ದಲಿತರ ವಿವಾಹ ಮೆರವಣಿಗೆ ತಡೆದ ಗುಜರಾತ್‌ನ ಎಲ್ಲಾ ಗ್ರಾಮಗಳಿಗೆ ನಾನು ಭೇಟಿ ನೀಡಿದ್ದೇನೆ” ಎಂದು ಆಝಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News