ಮಂಗಳೂರು: ಮೀನುಗಾರ ಮಹಿಳೆಯರ ಸಬಲೀಕರಣದ ತರಬೇತಿ ಕಾರ್ಯಕ್ರಮ
ಮಂಗಳೂರು : ಮೀನು ಪ್ರಕೃತಿ ದತ್ತವಾಗಿ ನಮಗೆ ದೊರೆತಿರುವ ಅತ್ಯಂತ ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುವ ಆಹಾರವಾಗಿದೆ. ಮೀನಿನಲ್ಲಿರುವ ಪೌಷ್ಠಿಕಾಂಶ ಕೋಳಿ ಹಾಗೂ ಇತರ ಮಾಂಸದಲ್ಲಿರುವ ಪೌಷ್ಠಿಕಾಂಶಕ್ಕೆ ಸಮಾನವಾಗಿದೆ ಎಂದು ಮೀನುಗಾರಿಕಾ ಮಹಾ ವಿದ್ಯಾಲಯದ ಡೀನ್ ಪ್ರೊ.ಎಸ್.ಎಂ.ಶಿವಪ್ರಕಾಶ್ ತಿಳಿಸಿದ್ದಾರೆ.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯ ಬೀದರ್ ಮೀನುಗಾರಿಕಾ ಮಹಾ ವಿದ್ಯಾಲಯ ಮಂಗಳೂರು, ಪರಿಶಿಷ್ಟಜಾತಿ ಉಪಯೋಜನೆ, ಪರಿಶಿಷ್ಟ ಪಂಗಡ ಯೋಜನೆಯಡಿ ನಗರದ ಮೀನುಗಾರಿಕಾ ಮಹಾವಿದ್ಯಾಲಯ ಹೊಗೈ ಬಝಾರ್ ಪ್ರದೇಶದಲ್ಲಿ ಆಯೋಜಿಸಿರುವ ಮೌಲ್ಯವರ್ಧಿತ ಮೀನಿ ಉತ್ಪನ್ನಗಳ ಉದ್ಯಮ ಶೀಲತೆ ಅಭಿವೃದ್ಧಿ ಮೂಲದ ಮೀನುಗಾರ ಮಹಿಳೆಯರ ಸಬಲೀಕರಣದ ಒಂದು ದಿನದ ತರಬೇತಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕರಾವಳಿಯ ಜನರಿಗೆ ಮೀನು ನಿಸರ್ಗದ ಅತ್ಯಂತ ದೊಡ್ಡ ಪೌಷ್ಠಿಕಾಂಶವಿರುವ ಆಹಾರದ ಕೊಡುಗೆ.100ಗ್ರಾಂ ಮೀನನಲ್ಲಿ ಇರುವ ಪೌಷ್ಠಿಕಾಂಶ ಅರ್ಧ ಲೀಟರ್ ಹಾಲಿಗೆ ಸಮ,ಅದೇ ರೀತಿ 160 ಗ್ರಾಂ ಗೋಧಿ ಆಹಾರಕ್ಕೆ , ಮೂರು ಮೊಟ್ಟೆ ಸೇವಿಸಿದಷ್ಟು ಪೌಷ್ಠಿಕಾಂಶ ದೊರೆಯುತ್ತದೆ.ಅಲ್ಲದೆ 285 ಗ್ರಾಂ ಅಕ್ಕಿಯಿಂದ ಮಾಡಿದ ಅನ್ನಕ್ಕೆ ಸಮಾನವಾಗಿದೆ.100 ಗ್ರಾಂ ಮೀನಿನ ಆಹಾರವೂ 100ಗ್ರಾಂ ಚಿಕನ್ ಅಥವಾ 100ಗ್ರಾಂ ಮಟನ್‌ಗೆ ಸಮಾನವಾದ ಪೌಷ್ಠಿಕಾಂಶವನ್ನು ಹೊಂದಿದೆ. ಮೀನಿನಲ್ಲಿರುವ ಕೊಬ್ಬು ಹೃದಯ ಆರೋಗ್ಯಕ್ಕೆ ಉತ್ತಮವಾದ ಕೊಲೆಸ್ಟ್ರಾಲ್‌ನ್ನು ಒದಗಿಸುತ್ತದೆ ಮತ್ತು ಮೀನು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ ಎಂದು ಶಿವಪ್ರಕಾಶ್ ತಿಳಿಸಿದ್ದಾರೆ.
ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ತಿಪ್ಪೇಸ್ವಾಮಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಸೂಕ್ಷ್ಮಾಣು ಜೀವ ಶಾಸ್ತ್ರ ವಿಭಾಗದ ಉಪನ್ಯಾಸಕಿ ವೀಣಾಶೆಟ್ಟಿ , ಸಹ ವಿಸ್ತರಣಾ ನಿರ್ದೇಶಕ ಪ್ರೊ.ಶಿವ ಕುಮಾರ್ ಮಗಧ ಮೊದಲಾದವರು ಉಪಸ್ಥಿತರಿದ್ದರು.
ಮೀನು ಸಂಸ್ಕರಣಾ ತಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಮಂಜಾನಾಯ್ಕಾ ಸ್ವಾಗತಿಸಿ ವಂದಿಸಿದರು. ಪೂರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು.