ಕಕ್ಯಪದವು ಬ್ರಹ್ಮಬೈದರ್ಕಳ ಗರೊಡಿ ಬ್ರಹ್ಮಕಲಶೋತ್ಸವ
ಬಂಟ್ವಾಳ : ಕಕ್ಯಪದವಿನಲ್ಲಿ ಅತ್ಯಂತ ಸುಂದರವಾದ ಗರಡಿ ನಿರ್ಮಾಣವಾಗಿದೆ. ಶಿಲೆ ಹಾಗೂ ಮರದ ಕೆತ್ತನೆಗಳು ಅದ್ಭುತವಾಗಿದೆ. ಈ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋಗುವ ಕೆಲಸ ಇಲ್ಲಿನ ಆಸ್ತಿಕ ಬಂಧುಗಳಾದ್ದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಅವರು ಶುಕ್ರವಾರ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ತೌಳವ ದ್ರಾವಿಡ ಶೈಲಿಯಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯ ಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಾಚನ ನೀಡಿ, ಸಮಾಜದ ಉನ್ನತಿಯನ್ನು ಬಯಸಿದ ಕೋಟಿ ಚೆನ್ನಯ್ಯರು ಎಲ್ಲರಿಂದಲೂ ಆರಾಧಿಸಲ್ಪಡುವವರಾಗಿದ್ದು, ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಪ್ರಾಸ್ತವಿಕವಾಗಿ ಮಾತನಾಡಿ, ತೀರಾ ಗ್ರಾಮೀಣ ಪ್ರದೇಶವಾದ ಕಕ್ಯಪದವಿನಲ್ಲಿ ಎಲ್ಲರ ಸಹಕಾರದಿಂದ ಗರಡಿ ಕ್ಷೇತ್ರವನ್ನು ಪುನರ್ ನಿರ್ಮಾಣಗೊಂಡಿದೆ. ದೈವ ದೇವಸ್ಥಾನಗಳ ಪುನರುತ್ಥಾನಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಪುಣ್ಯದ ಕಾರ್ಯ ಎಂದರು.
ಸಭಾ ಕಾರ್ಯಕ್ರಮದಲ್ಲಿ ಧರ್ಮಾಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಮಿತಿಯ ಗೌರವಾಧ್ಯಕ್ಷ ಬಿ.ರಮನಾಥ ರೈ ಹಾಗೂ ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಅವರನ್ನು ಗರಡಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಮೋಕ್ತೇಸರ ಕುಟುಂಬಸ್ಥರಾದ ರಾಜವೀರ್ ಜೈನ್, ಸಂಚಾಲಕರಾದ ಚಿತ್ತರಂಜನ್ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಧ್ಯಕ್ಷ ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ರತ್ನ ಕುಮಾರ್ ಆರಿಗ ನಾಯಿಲ, ಕಕ್ಯಬೀಡು ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷ ಕೆ. ಮೋನಪ್ಪ ಪೂಜಾರಿ ಕಂಡೆತ್ಯಾರು ಸ್ವಾಗತಿಸಿದರು, ರಾಜೀವ ಕೆ. ಸನ್ಮಾನ ಪತ್ರ ವಾಚಿಸಿದರು, ಡಾ. ರಾಜರಾಂ ಕೆ.ಬಿ. ವಂದಿಸಿದರು. ಶಿಕ್ಷಣ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.