ಮೇ 25: ಪುತ್ತೂರಿನಲ್ಲಿ 'ವೈಬ್ ಇಂಡಿಯಾ' ರಾಷ್ಟ್ರ ಮಟ್ಟದ ಡ್ಯಾನ್ಸ್ ಸ್ಫರ್ಧೆ-ಗ್ರಾಂಡ್ ಫಿನಾಲೆ

Update: 2019-05-17 17:35 GMT

ಪುತ್ತೂರು: ಪುತ್ತೂರಿನ ಡಿಝೋನ್ ಡ್ಯಾನ್ಸ್ ಅಕಾಡಮಿಯ ಆಶ್ರಯದಲ್ಲಿ ಮೇ 25ರಂದು ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಪರ್ಪುಂಜದಲ್ಲಿರುವ ಎಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೊರಿಯಂನಲ್ಲಿ 'ವೈಬ್ ಇಂಡಿಯಾ' ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ  ನಡೆಯಲಿದೆ.

ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ರಾಷ್ಟ್ರ ಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಧೆಯ ಸಂಘಟಕರಾದ ಡಿಝೋನ್ ಡ್ಯಾನ್ಸ್ ಅಕಾಡಮಿಯ ನಿರ್ದೇಶಕ ದೀಕ್ಷಿತ್ ರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಒಡಿಸ್ಸಾ, ದೆಹಲಿ, ಗೋವಾ ಸೇರಿದಂತೆ ದೇಶದ ನಾನಾ ಭಾಗಗಳಿಂದ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಈಗಾಗಲೇ ಆನ್‍ಲೈನ್ ಮೂಲಕ ಆಡಿಶನ್ ಪ್ರಕ್ರಿಯೆ ನಡೆದಿದ್ದು, ಗ್ರ್ಯಾಂಡ್ ಫಿನಾಲೆ ಮಾತ್ರ ಇಲ್ಲಿ ನಡೆಯುತ್ತಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 30ಸಾವಿರ ರೂ. ಮತ್ತು ತೃತೀಯ ಬಹುಮಾನ 20 ಸಾವಿರ ರೂ. ಇದೆ. ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳು ಸಾಮಾನ್ಯವಾಗಿ ಮುಂಬೈ, ದೆಹಲಿ, ಚೆನ್ನೈ, ಗೋವಾ ಮೊದಲಾದ ಕಡೆ ನಡೆಯುತ್ತದೆ. ಇದೇ ಮೊದಲ ಬಾರಿಗೆ ಪುತ್ತೂರಿನಂಥ ಗ್ರಾಮೀಣ ಪ್ರದೇಶಕ್ಕೆ ಈ ಸ್ಪರ್ಧೆಯನ್ನು ತರುತ್ತಿದ್ದೇವೆ. ಡ್ಯಾನ್ಸ್ ಪ್ಲಸ್ ರಿಯಾಲಿಟಿ ಶೋ ಖ್ಯಾತಿಯ ಕಾರ್ತಿಕ್ ರಾಜ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನ ಕಿಶೋರ್ ಅಮನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸಲಿದ್ದು, ನಿರೂಪಕರಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಶಾಹಿಲ್ ಝಹೀರ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನೃತ್ಯ ಸ್ಫರ್ಧೆಯ ಉದ್ಘಾಟನಾ ಸಮಾರಂಭ ಅಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ. ಇದಾದ ಬಳಿಕ ಡಿಝೋನ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ. ನಂತರ ರಾಷ್ಟ್ರ ಮಟ್ಟದ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಝೋನ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ರಾಮಕೃಷ್ಣ ಭಟ್, ಕಾರ್ಯದರ್ಶಿ ಪ್ರಸಾದ್ ರೈ, ವಿದ್ಯಾರ್ಥಿ ಈಶಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News