​ಅಮೆಝಾನ್ ವಿರುದ್ಧ ಎಫ್‌ಐಆರ್!

Update: 2019-05-18 04:03 GMT

ನೋಯ್ಡ, ಮೇ 18: ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಝಾನ್ ವಿರುದ್ಧ "ಹಿಂದೂ ಭಾವನೆಗಳಿಗೆ ಧಕ್ಕೆ" ತಂದ ಆರೋಪದಲ್ಲಿ ನೋಯ್ಡೆ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಅಮೆಝಾನ್‌ನ ಅಮೆರಿಕ ವೆಬ್‌ಸೈಟ್‌ನಲ್ಲಿ ಹಿಂದೂ ದೇವತೆಗಳ ಚಿತ್ರ ಇರುವ ರಗ್ ಹಾಗೂ ಶೌಚಾಲಯ ಸೀಟ್‌ ಕವರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ "ಅಮೆಝಾನ್ ಧಿಕ್ಕರಿಸಿ" ಎಂಬ ಆನ್‌ಲೈನ್ ಅಭಿಯಾನ ಕೈಗೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಝಾನ್ ವಕ್ತಾರ, "ಎಲ್ಲ ಮಾರಾಟಗಾರರು ಕಂಪೆನಿಯ ಮಾರಾಟ ನಿಯಮಾವಳಿಗಳನ್ನು ಅನುಸರಿಸಬೇಕು. ಅದಕ್ಕೆ ಬದ್ಧರಾಗದವರ ವಿರುದ್ಧ ಅವರ ಖಾತೆಗಳನ್ನು ಕಿಕ್ಕುಹಾಕುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ. ವಿವಾದಿತ ಉತ್ಪನ್ನಗಳನ್ನು ಈಗಾಗಲೇ ಮಳಿಗೆಯಿಂದ ತೆರವು ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುತ್ತಿರುವ ಆರೋಪದ ಮೇಲೆ ನೋಯ್ಡದ ಸೆಕ್ಟರ್ 58 ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ವಿದೇಶಿ ಮೂಲದ ಈ ಕಂಪೆನಿ ನಿಯತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದು ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಕಂಪೆನಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ವಿಕಾಸ್ ಮಿಶ್ರಾ ದೂರಿನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News