ತಾಯಿಯ ಗರ್ಭದಲ್ಲಿರುವಾಗಲೇ ಮಗುವಿನ ಬೆನ್ನು ಹುರಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

Update: 2019-05-18 11:56 GMT

ಲಂಡನ್, ಮೇ 18: ಇಂಗ್ಲೆಂಡ್ ನಲ್ಲಿ ಪ್ರಪ್ರಥಮವೆಂಬಂತೆ ಶಿಶುವೊಂದು ತಾಯಿಯ ಗರ್ಭದಲ್ಲಿರುವಾಗಲೇ ವೈದ್ಯರು ಕೀ ಹೋಲ್ ಸರ್ಜರಿ ಮೂಲಕ ಅದರ ಬೆನ್ನು ಹುರಿಯ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದ್ದಾರೆ.

ತಾಯಿ ಶೆರ್ರೀ ಶಾರ್ಪ್(28) ಗರ್ಭದೊಳಗಿನ ಭ್ರೂಣಕ್ಕೆ 27 ವಾರವಾದಾಗ ಈ ಕ್ಲಿಷ್ಟಕರ ಶಸ್ತ್ರಕ್ರಿಯೆಯನ್ನು ಲಂಡನ್ ನಗರದ ಕಿಂಗ್ಸ್ ಕಾಲೇಜ್ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ್ದರು.

ಶೆರ್ರೀ ಗರ್ಭದಲ್ಲಿರುವ ಭ್ರೂಣಕ್ಕೆ 20 ವಾರ ಆಗಿದ್ದಾಗ ನಡೆಸಲಾದ  ಸ್ಕ್ಯಾನ್ ವೇಳೆ ಶಿಶುವಿನ ಬೆನ್ನು ಹುರಿಯಲ್ಲಿ ಸ್ಪೈನಾ ಬಿಫಿಡಾ ಎಂಬ ಸಮಸ್ಯೆಯಿರುವುದು  ಪತ್ತೆಯಾಗಿತ್ತು. ಶಿಶುವಿನ ಬೆನ್ನೆಲುಬು ಹಾಗೂ ಬೆನ್ನಿನ ಹುರಿ ಸರಿಯಾಗಿ ಬೆಳೆಯುತ್ತಿಲ್ಲ ಎಂದು ವೈದ್ಯರು ಪತ್ತೆ ಹಚ್ಚಿದ್ದರಲ್ಲದೆ ಬೆನ್ನು ಹುರಿ ಬೆನ್ನೆಲುಬಿನ ಹೊರ ಚಾಚುತ್ತಿರುವುದನ್ನೂ ಗಮನಿಸಿದ್ದರು. ಇದನ್ನು ಹೀಗೆಯೇ ಬಿಟ್ಟರೆ ಹಲವು ಪ್ರಮುಖ ನರಗಳಿಗೆ ಅಪಾಯವುಂಟಾಗಿ ಪಾಶ್ರ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹಾಗೂ ಇನ್ನಿತರ ಸಮಸ್ಯೆ ಎದುರಾಗಬಹುದೆಂದೂ ವೈದ್ಯರು ಅರಿತಿದ್ದರು.

 ಮಗುವು ಭ್ರೂಣದಲ್ಲಿರುವಾಗಲೇ ನಡೆಸಿದ ಈ ಶಸ್ತ್ರಕ್ರಿಯೆ ಶಿಶುವಿನ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲವಾದರೂ ಹೆಚ್ಚಿನ ಅಪಾಯದಿಂದ ಮಗುವನ್ನು ಪಾರು ಮಾಡುವುದು ಎಂದು ವೈದ್ಯರು ತಿಳಿಸಿದ್ದಾರೆ. ಈ ಕೀ ಹೋಲ್ ಸರ್ಜರಿ ಸಣ್ಣ ತೂತಿನ ಮೂಲಕ ಕ್ಯಾಮರಾ ಸಹಾಯದಿಂದ  ನಡೆಸಲಾಗುತ್ತದೆ. ಮೂರು ಗಂಟೆ ಅವಧಿಯ ಈ ಶಸ್ತ್ರಕ್ರಿಯೆಯಲ್ಲಿ ಶಿಶುವಿನ ಬೆನ್ನು ಹುರಿಯನ್ನು ಸ್ವಸ್ಥಾನದಲ್ಲಿರಿಸಿ ಅದರ ದ್ರವ ಹೊರಬರದಂತೆ ಅದನ್ನು ಪ್ಯಾಚ್ ಮೂಲಕ ವೈದ್ಯರು ಮುಚ್ಚಿದ್ದರು.

ಶಿಶು ನಂತರ ಅವಧಿ ಪೂರ್ವ ಅಂದರೆ 33 ವಾರಗಳಲ್ಲಿಯೇ ಜನಿಸಿದ್ದು ಸದ್ಯ ಆರೋಗ್ಯದಿಂದಿದೆ.

 ಜೇಕ್ಸನ್ ಎಂಬ ಹೆಸರಿಡಲಾಗಿರುವ ಈ ಶಿಶು ಎಪ್ರಿಲ್ 20ರಂದು  ಜನಿಸಿದ್ದು ಮಗುವಿನ ಬೆಳವಣಿಗೆಯಿಂದ ತಾಯಿ ಸಂತುಷ್ಟರಾಗಿದ್ದಾರೆ. ``ನನ್ನ ಮಗುವೇ ಒಂದು ಪವಾಡ ಆತನನ್ನು ನೋಡಿ ನನಗೆ ಹೆಮ್ಮೆಯುಂಟಾಗುತ್ತದೆ,'' ಎಂದು ಶೆರ್ರೀ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News