ತಣ್ಣೀರು ಬಾವಿಯಲ್ಲಿ ರಾಜ್ಯದ ಮೊದಲ ಮರೈನ್ ಮೂಸಿಯಂ ನಿರ್ಮಿಸಲು ಯೋಜನೆ

Update: 2019-05-18 12:43 GMT

ಮಂಗಳೂರು, ಮೇ18: ತಣ್ಣೀರು ಬಾವಿ ಬೀಚ್‌ನಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಟ್ರೀ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯದ ಮೊದಲ (ಮರೈನ್ ಮೂಸಿಯಂ) ಸಮುದ್ರದೊಳಗಿನ ಮೂಸಿಯಂ ಒಂದನ್ನು ನಿರ್ಮಿಸುವ ಗುರಿ ಇದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್ ಮಾದ್ಯಮ ವರದಿಗಾರರಿಗೆ ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಈ ರೀತಿಯ ಮರೈನ್ ಮ್ಯೂಸಿಯಂ ನಿರ್ಮಿಸಿದ್ದಾರೆ. ಅದಕ್ಕೆ 36 ಕೋಟಿ ರೂ ವೆಚ್ಚವಾಗಿದೆ. ಅಂಡಮಾನ್‌ನಲ್ಲಿ ಸಣ್ಣ ಪ್ರಮಾಣದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಮೆರೈನ್ ಮುಸಿಯಂ ನಿರ್ಮಿಸಿದ್ದಾರೆ. ನಾವು ಅಂಡಮಾನ್ ಮಾದರಿಯ ಮೆರೈನ್ ಮೂಸಿಯಂ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸೂಚನೆ ಬಂದಿರುತ್ತದೆ ಎಂದು ಶ್ರೀಧರ್ ತಿಳಿಸಿದ್ದಾರೆ.

ಈ ರೀತಿಯ ಮರೈನ್ ಮೂಸಿಯಂನಲ್ಲಿ ಸಮುದ್ರದೊಳಗೆ ಸಂಚರಿಸುವ ಅನುಭವ ವೀಕ್ಷಕರಿಗಾಗುವಂತೆ ಮೂಸಿಯಂನ್ನು ನಿರ್ಮಿಸಲಾಗುತ್ತದೆ ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಂಡಮಾನ್‌ಗೆ ಭೇಟಿ ನೀಡಿ ಯೋಜನೆಯ ಅಂದಾಜು ವೆಚ್ಚದೊಂದಿಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಶ್ರೀಧರ್ ತಿಳಿಸಿದ್ದಾರೆ.

ತಣ್ಣೀರು ಬಾವಿ ಟ್ರೀ ಪಾರ್ಕ್ :-ಮಂಗಳೂರು ನಗರದ ಜನರಿಗೆ ವಾರಾಂತ್ಯ ಕಳೆಯಲು ಹಾಗೂ ಮಂಗಳೂರಿನ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡುವವರಿಗೆ ಸಮಯ ಕಳೆಯಲು 2016ರಲ್ಲಿ 15 ಹೆಕ್ಟೇರ್ ಪ್ರದೇಶದಲ್ಲಿ 1.99 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಟ್ರೀ ಪಾರ್ಕ್‌ನ್ನು ಇನ್ನಷ್ಟು ಆಕರ್ಷವಾಗಿ ಮಾಡಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಪಾರ್ಕ್‌ನಲ್ಲಿ ಸ್ಥಳೀಯ ವಿವಿಧ ಜಾತಿಗಳ ಸಸ್ಯಗಳನ್ನು ನೆಡಲಾಗಿದೆ ಪಶ್ಚಿಮ ಘಟ್ಟದ ಸುಮಾರು 50ಕ್ಕೂ ಅಹೆಚ್ಚು ವಿವಿಧ ಜಾತಿಯ ಗಿಡಗಳನ್ನು 16ರಷ್ಟು ಔಷಧೀಯ ಸ್ಸಗಳನ್ನು ನೆಡಲಾಗಿದೆ. ಇದಲ್ಲದೆ ಬಾದಾಮು ಹೊಳೆ ಹೊನ್ನೆ, ಆಲ, ಅರಳಿ, ಫೈಕಸ್ ಗಿಡಗಳನ್ನು ನೆಡಲಾಗಿದೆ .ಈ ಟ್ರೀ ಪಾರ್ಕ್‌ನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.ಐದು ವರ್ಷದ ಮಕ್ಕಳಿಗೆ ಉಚಿತವಾಗಿ ಪ್ರವೇಶ,5ರಿಂದ 18 ವರ್ಷದ ಮಕ್ಕಳಿಗೆ 5 ರೂ ಮತ್ತು ಹಿರಿಯರಿಗೆ 10 ರೂ ಪ್ರವೇಶ ಶುಲ್ಕವಿರುತ್ತದೆ. ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಕಳೆದ ಮೂರು ವರ್ಷದಲ್ಲಿ 23 ಲಕ್ಷ ರೂ ಸಂಗ್ರಹವಾಗಿರುತ್ತದೆ. ಮಂಗಳೂರು ನಗರದಲ್ಲಿ ಕದ್ರಿಪಾರ್ಕ್ ಬಿಟ್ಟರೆ ಹತ್ತಿರದಲ್ಲಿರುವ ಮತ್ತು ಸಮುದ್ರ ತೀರವನ್ನು ಹೊಂದಿರುವ ಪಾರ್ಕ್ ತಣ್ಣೀರು ಬಾವಿ ಟ್ರೀಪಾರ್ಕ್ ಆಗಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಈ ಟ್ರೀ ಪಾರ್ಕ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಮಾಡುವ ಉದ್ದೇಶವಿದೆ.ಇಲ್ಲಿಗೆ ಆಗಮಿಸುವ ಜನರು ಛಾಯಾಚಿತ್ರ,ಸೆಲ್ಫಿ ತೆಗೆದಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಆಮೆಯೊಂದನ್ನು ನಿರ್ಮಿಸುವ ಗುರಿ ಇದೆ ಈ ಯೋಜನೆಗೆ ಎಂಆರ್‌ಪಿಎಲ್ ಅನುದಾನದ ಸಹಾಯದಿಂದ ಸೆಲ್ಫಿ ಟರ್ಟ್‌ಲ್ ಒಂದನ್ನು ನಿರ್ಮಿಸುವ ಗುರಿ ಇದೆ.ಈ ಟ್ರೀ ಪಾರ್ಕ್‌ನಲ್ಲಿ ಮಕ್ಕಳ ಪಾರ್ಕ್, ಆ್ಯಂಫಿಥಿಯೇಟರ್, ಪ್ಯಾರಾಗೋಲ್, ಸಿಮೆಂಟ್‌ನ ಬೆಂಚ್‌ಗಳಿವೆ,ಪರಿಸರದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸ್ಥಳೀಯ ಕಲೆ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಯಕ್ಷಗಾನ, ಕಂಬಳ, ಭೂತದ ಕೋಲ ಹಾಗೂ ಸ್ಥಳೀಯ ಬುಡಕಟ್ಟು ಜನರ ಬದುಕಿಗೆ ಸಂಬಂಧಿಸಿದ ಪ್ರತಿಕೃತಿಗಳನ್ನು ರಚಿಸಿ ಜನರಿಗೆ ಮಾಹಿತಿ ನೀಡಲಾಗುತ್ತದೆ.

ಮರಳಿನ ವ್ಯಾಯಾಮ:- ಈ ಪಾರ್ಕಿನ ಮಂಭಾಗದಲ್ಲಿಂದ ಆರಂಭಗೊಂಡು ಸುಮಾರು ಒಂದು ಕಿ.ಮೀಟರ್ ಮರಳಿನಲ್ಲಿಯೇ ನಡಿಗೆಯ ಮಾಡಲು ಅವಕಾಶವಿದೆ ಇದೊಂದು ವಿಶೇಷ ಆಕರ್ಷಣೆ·ಮರಳಿನಿಂದ ಕೂಡಿದ ಇ ಪಾರ್ಕ್‌ಗೆ ಬರುವವರಿಗೆ ಇದು ದೈಹಿಕವಾಗಿ ವ್ಯಾಯಾಮವನ್ನು ಒದಗಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೂಳೂರು -ಬೆಂಗರೆ ಕಾರಿಡಾರ್ ಯೋಜನೆಯಿಂದ ತಣ್ಣೀರು ಬಾವಿ ಟೀಪಾರ್ಕ್‌ಗೆ ಇನ್ನಷ್ಟು ವೀಕ್ಷಕರು ಹೆಚ್ಚಾಗಬಹುದು ಎಂದು ಶ್ರೀಧರ್ ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News