'ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಸುಗಮ ಮತ ಎಣಿಕೆಗೆ ಸರ್ವ ಸಿದ್ಧತೆ'

Update: 2019-05-18 14:27 GMT

ಉಡುಪಿ, ಮೇ 18: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯ ಅಂತಿಮ ಘಟ್ಟವಾದ ಮತಗಳ ಎಣಿಕೆಯನ್ನು ಇದೇ ಮೇ 23ರ ಗುರುವಾರ ಬೆಳಗ್ಗೆ 8 ಗಂಟೆಯಿಂದ ನಗರದ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ಕಟ್ಟಡಗಳಲ್ಲಿ ಚುನಾವಣಾ ವೀಕ್ಷಕರ, ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಸಲಾಗುತ್ತದೆ. ಸುಗಮ ಮತ ಎಣಿಕೆಗೆ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿ ಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಮತ ಎಣಿಕೆಗಾಗಿ ಕೈಗೊಂಡ ಕ್ರಮಗಳ ಕುರಿತು ಅವರು ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಒಟ್ಟು 14 ಕೊಠಡಿಗಳಲ್ಲಿ ನಡೆಯ ಲಿದೆ. ಕುಂದಾಪುರ ಮತ್ತು ಕಾರ್ಕಳ ವಿಧಾನಸಭಾ ಕ್ಷೇಔತ್ರಗಳ ಮತ ಎಣಿಕೆಯು ತಲಾ ಒಂದೊಂದು ಕೊಠಡಿಯಲ್ಲಿ ನಡೆದರೆ, ಉಳಿದ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ಕೊಠಡಿಗಳಲ್ಲಿ ನಡೆಯಲಿವೆ. ಕೊಠಡಿಗಳಲ್ಲಿ ಮತ ಎಣಿಕೆಯನ್ನು ಸುರಕ್ಷಿತವಾಗಿ ನಡೆಸಲು ಮತ ಎಣಿಕೆ ಅಧಿಕಾರಿ ಹಾಗೂ ಮತ ಎಣಿಕೆ ಏಜೆಂಟ್‌ಗಳ ನಡುವೆ ತಂತಿ ಮೆಸ್ ಹಾಕಿ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಹೆಪ್ಸಿಬಾ ರಾಣಿ ನುಡಿದರು.

130 ಸಿಸಿಟಿವಿ ಅಳವಡಿಕೆ: ಪ್ರತಿಯೊಂದು ಮತ ಎಣಿಕಾ ಕೊಠಡಿಗೆ ಕನಿಷ್ಠ 2ರಿಂದ ಮೂರು ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ಮತಯಂತ್ರಗಳ ಸುರಕ್ಷಿತೆಗಾಗಿ ಈ ಮೊದಲೇ 105 ಸಿಸಿಟಿವಿ ಕೆಮರಾ ಅಳವಡಿಸಲಾಗಿದ್ದು, ಈ ಮೂಲಕ ಇಡೀ ಮತ ಎಣಿಕೆ ಕೇಂದ್ರದಲ್ಲಿ 130 ಸಿಸಿಟಿವಿ ಕೆಮರಾಗಳನ್ನು ಅಳಡಿಸಿದ್ದೇವೆ ಎಂದವರು ವಿವರಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಗಾಗಿ ತಲಾ 14 ಮೇಜುಗಳನ್ನು ಅಳವಡಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಬೆಳಗ್ಗೆ 8ಗಂಟೆಗೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಪ್ರತ್ಯೇಕ ಐದು ಮೇಜುಗಳಲ್ಲಿ ನಡೆಯಲಿದೆ. ಮತ ಎಣಿಕೆ ಎಂಟು ಸಹಾಯಕ ಚುನಾವಣಾಧಿಕಾರಿ ಹಾಗೂ ಆರು ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆ ಯಲ್ಲಿ ಪ್ರತಿಯೊಂದು ಕೊಠಡಿಯಲ್ಲಿ ನಡೆಯಲಿದೆ.

ಹೀಗೆ ಮತ ಎಣಿಕೆಗೆ ಒಟ್ಟು 127 ಮತ ಎಣಿಕೆ ಮೇಲ್ವಿಚಾರಕರು, 131 ಮತ ಎಣಿಕೆ ಸಹಾಯಕರು, 127 ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸ ಲಾಗಿದೆ. ಇದಲ್ಲದೇ 21ಮಂದಿ ಟ್ಯಾಬ್ಯುವೇಶನ್‌ಗೆ, 127 ಮಂದಿ ಡಿದರ್ಜೆ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ. ಈ ಎಲ್ಲಾ ಮತ ಎಣಿಕೆ ಅಧಿಕಾರಿ, ಸಿಬ್ಬಂದಿಗಳಿಗೆ ಮೇ 17ರಂದು ಮೊದಲ ಹಂತದ ತರಬೇತಿ ನೀಡಲಾಗಿದೆ. ಇನ್ನು ಮೇ 19ರಂದು ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ ಮತ ಎಣಿಕಾ ಕೇಂದ್ರದಲ್ಲಿ ಎರಡನೇ ಸುತ್ತಿನ ತರಬೇತಿ ನೀಡಲಾಗುತ್ತದೆ ಎಂದರು.

ನಿಯಂತ್ರಣ ಕೊಠಡಿಗೆ ಭದ್ರತೆ: ಮತದಾನ ನಡೆದ ಎ.18ರಿಂದ ಸೈಂಟ್ ಸಿಸಿಲೀಸ್‌ನ ಭದ್ರತಾ ಕೊಠಡಿಯಲ್ಲಿ ಇವಿಎಂ ಯಂತ್ರ ಹಾಗೂ ವಿವಿಪ್ಯಾಟ್ ಗಳನ್ನು ಬಿಗುವಾದ ಭದ್ರತಾ ವ್ಯವಸ್ಥೆಯೊಂದಿಗೆ ಇರಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾಧಿಕಾರಿಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ಮೊಬೈಲ್, ಬೀಡಿ, ಸಿಗರೇಟ್, ಬೆಂಕಿಪಟ್ಟಣ, ಕತ್ತರಿ, ಬ್ಲೇಡ್ ಕೊಂಡೊಯ್ಯುವಂತಿಲ್ಲ. ತೀವ್ರ ತಪಾಸಣೆಯ ಬಳಿಕ ಪ್ರತಿಯೊಬ್ಬರನ್ನು ಒಳಗೆ ಬಿಡಲಾಗುತ್ತದೆ.

ಮತ ಎಣಿಕೆ ಕೇಂದ್ರದಿಂದ 100ಮೀ. ಸುತ್ತಲೂ ವಾಹನ ಸಂಚರಿಸುವಂತಿಲ್ಲ. ಇವು ಪಾದಾಚಾರಿ ವಲಯಗಳಾಗಿದ್ದು, ಮೂರು ಸ್ಥಳಗಳಲ್ಲಿ ಲೋಹಶೋಧಕ ಯಂತ್ರಗಳನ್ನು ಅಳವಡಿಸಲಾಗಿದೆ. ಇಲ್ಲಿ ಪೊಲೀಸರು ಮೂರು ಹಂತಗಳಲ್ಲಿ ತಪಾಸಣೆ ನಡೆಸಲಿದ್ದಾರೆ.

ಮತ ಎಣಿಕೆ ಪರಿಶೀಲನೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಪ್ರತಿ ಮೇಜಿಗೆ ತಲಾ ಒಬ್ಬರು ಏಜೆಂಟರನ್ನು ನೇಮಿಸಲು ಅವಕಾಶವಿದೆ. ಇವರಿಗೂ ನಿಯಮಾ ನುಸಾರ ಗುರುತಿನ ಚೀಟಿ ವಿತರಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟರುಗಳಿಗೂ ಪ್ರತ್ಯೇಕ ಬಣ್ಣದ ಗುರುತಿನ ಚೀಟಿ ನೀಡಲಾಗಿದೆ.

ಮತ ಎಣಿಕೆಯ ವೇಳೆ ಜಿಲ್ಲೆಯಲ್ಲಿ ಕಾನೂನು ಸುರಕ್ಷತೆ ಹಾಗೂ ಶಾಂತಿಯನ್ನು ಕಾಪಾಡಲು ಮೇ 23ರ ಬೆಳಗ್ಗೆ 6ರಿಂದ 25ರ ಬೆಳಗ್ಗೆ 6ರವರೆಗೆ ಐಪಿಸಿ ಕಲಂ 144ರಡಿಯಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಅದೇ ರೀತಿ ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸಿಡಿಮದ್ದು, ಪಟಾಕಿಯ ಮಾರಾಟ ಹಾಗೂ ಸಿಡಿಸುವು ದನ್ನು ಸಹ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.

ಅಲ್ಲದೇ ಮೇ 22ರ ಸಂಜೆ 6:00ರಿಂದ 24ರ ಬೆಳಗ್ಗೆ 6ರವರೆಗೆ ಮದ್ಯ ಸಾಗಾಟ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಈ ದಿನಗಳನ್ನು ‘ಶುಷ್ಕ ದಿನ’ಗಳೆಂದು ಘೋಷಿಸಲಾಗಿದೆ.

ವೀಕ್ಷಕರ ನೇಮಕ: ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ಇಬ್ಬರು ಚುನಾವಣಾ ವೀಕ್ಷಕರನ್ನು ನೇಮಿಸಿದೆ. ಕೃಷ್ಣ ಕುನಾಲ್ ಅವರು ಸಾಮಾನ್ಯ ವೀಕ್ಷಕರಾಗಿದ್ದರೆ, ನಿತೇಶ್ವರ ಕುಮಾರ್ ಅವರು ಮತ ಎಣಿಕಾ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಪ್ರತಿ ಮತ ಎಣಿಕೆ ಕೊಠಡಿಯಲ್ಲಿ ಪ್ರತಿ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ವಿಧಾನಸಭಾ ಕ್ಷೇತ್ರವಾರು ಪ್ರತಿ ಅಭ್ಯರ್ಥಿ ಗಳಿಸಿದ ಮತಗಳನ್ನು ವಿವರಗಳನ್ನು ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ಅನುಮೋದನೆ ಪಡೆದು ಪ್ರಕಟಿಸಲಾಗುತ್ತದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತಗಳ ಎಣಿಕೆ 15ರಿಂದ 19 ಸುತ್ತುಗಳಲ್ಲಿ ನಡೆಯುತ್ತದೆ.

ವಿವಿಪ್ಯಾಟ್ ಮತ ಎಣಿಕೆ: ಇವಿಎಂ ಯಂತ್ರದಲ್ಲಿರುವ ಮತಗಳ ಸಂಪೂರ್ಣ ಎಣಿಕೆ ಮುಗಿದ ಬಳಿಕ, ಚುನಾವಣಾ ಆಯೋಗದ ಆದೇಶದಂತೆ ಪ್ರತಿ ವಿಧಾನ ಸಭಾ ಕ್ಷೇತ್ರದ ತಲಾ ಐದು ವಿವಿಪ್ಯಾಟ್‌ನ ಮತಗಳ ಎಣಿಕೆ ನಡೆಯಲಿದೆ. ಇವುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದರೆ ಚಿಕ್ಕಮಗಳೂರಿನ ಒಂದು ಮತಗಟ್ಟೆಯಲ್ಲಿ, ಅಣಕು ಮತದಾನದ ಮತಗಳನ್ನು ಅಳಿಸದೇ ಇರುವುದರಿಂದ ಈ ಮತಗಟ್ಟೆಯ ವಿವಿಪ್ಯಾಟ್‌ನ ಮತಗಳ ಎಣಿಕೆ ಯನ್ನು ಆಯೋಗ ಕಡ್ಡಾಯಗೊಳಿಸಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.

ವಿವಿ ಪ್ಯಾಟ್‌ನ ಮತಗಳ ಎಣಿಕೆಯನ್ನು ಒಂದು ಕ್ಷೇತ್ರ ಮುಗಿದ ಬಳಿಕ ಇನ್ನೊಂದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇವುಗಳ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಅಲ್ಲಿಂದ ಹಸಿರು ನಿಶಾನೆ ದೊರೆತ ಬಳಿಕವಷ್ಟೇ ಕ್ಷೇತ್ರದ ಅಧಿಕೃತ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಇವಿಎಂಗಳ ಮತ ಎಣಿಕೆ ಅಪರಾಹ್ನ 2 ಗಂಟೆಯ ಸುಮಾರಿಗೆ ಮುಗಿದರೆ, ಎಲ್ಲವೂ ನಿರೀಕ್ಷಿತ ರೀತಿಯಲ್ಲಿ ನಡೆದರೆ ಅಧಿಕೃತ ಫಲಿತಾಂಶದ ಪ್ರಕಟಣೆ ಸಂಜೆ 6-7ಗಂಟೆಯ ಸುಮಾರಿಗೆ ಹೊರಬೀಳಬಹುದು ಎಂದವರು ನುಡಿದರು.

ಭದ್ರತೆಗೆ 312 ಸಿಬ್ಬಂದಿಗಳು

ಮತ ಎಣಿಕೆಯ ವೇಳೆ ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ಪ್ರಕ್ರಿಯೆ ಸುಗಮವಾಗಿ ನಡೆಯಲು, ಭದ್ರತೆಗಾಗಿ ಕೇಂದ್ರದಿಂದ ಒಂದು ತುಕುಡಿ ಸಿಆರ್‌ಪಿಎಸ್, ಮೂರು ತುಕುಡಿ ಕೆಎಸ್‌ಆರ್‌ಪಿ ನಿಯೋಜನೆ ಗೊಂಡಿದೆ. ಅಲ್ಲದೇ ಮೂವರು ಡಿವೈಎಸ್ಪಿ, ಆರು ಮಂದಿ ಸರ್ಕಲ್ ಇನ್‌ಸ್ಪೆಕ್ಟರ್, 23 ಪಿಎಸ್‌ಐ ಹಾಗೂ 280 ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು 312 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಇದರೊಂದಿಗೆ 83ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆಯಲ್ಲಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ

ಮತ ಎಣಿಕೆ ಕೇಂದ್ರದೊಳಗೆ ಯಾರಿಗೂ ಮೊಬೈಲ್‌ಫೋನ್ ಹಾಗೂ ಸ್ಮಾರ್ಟ್ ಉಪಕರಣಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಯಾರಾದರೂ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ತಂದರೆ ಅವರ ಮೊಬೈಲ್ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಹೇಳಿದರು.

ಕೇಂದ್ರ ಆರ್‌ಒಗಳಿಗೆ ಹಾಗೂ ಪತ್ರಕರ್ತರಿಗೆ ಮಾಧ್ಯಮ ಕೇಂದ್ರದೊಳಗೆ ಮಾತ್ರ ಮೊಬೈಲ್ ಬಳಸಲು ಅವಕಾಶ ನೀಡಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಯಾರಿಗೂ ಅತ್ತಿತ್ತ ಅಲೆದಾಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News