ಪಕ್ಷದಿಂದ ಬಿಜೆಪಿ ಮುಖಂಡರ ಉಚ್ಚಾಟನೆಗೆ ಕಾಂಗ್ರೆಸ್ ಆಗ್ರಹ

Update: 2019-05-18 14:47 GMT

ಉಡುಪಿ, ಮೇ 18: ಗಾಂಧೀಜಿಯನ್ನು ಕೊಂದಿರುವ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ನಾಯಕರು ವೈಭವೀಕರಿಸುವುದು ಖಂಡನೀಯ. ಬಿಜೆಪಿ ಮಹಾತ್ಮಾ ಗಾಂಧಿಯ ಬಗ್ಗೆ ಕಿಂಚಿತ್ ಅಭಿಮಾನ ಇದ್ದಲ್ಲಿ ಈ ರೀತಿಯ ದೇಶದ್ರೋಹದ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕಾತಿರ ಭಾಸ್ಕರ್ ರಾವ್ ಕಿದಿಯೂರು ಒತ್ತಾಯಿಸಿದ್ದಾರೆ.

ರಾಜೀವ ಗಾಂಧಿಯವರು ದೇಶದ ಐಕ್ಯತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರೆ, ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತಹವರನ್ನು ಕೊಂದ ಗೋಡ್ಸೆಯನ್ನು ದೇಶಭಕ್ತರೆಂದು ಬಿಂಬಿಸುವ ಬಿಜೆಪಿ ಚಿಂತನೆ ಅಪಾಯಕಾರಿ ಬೆಳವಣಿಗೆ ಎಂದು ಅವರು ದೂರಿದ್ದಾರೆ.

ನಾಥೂರಾಮ್ ಗೋಡ್ಸೆ, ಅಜ್ಮಲ್ ಕಸಬ್‌ರೊಂದಿಗೆ ಹೋಲಿಕೆ ಮಾಡಿ ರಾಜೀವ್ ಗಾಂಧಿಯನ್ನು ಕ್ರೂರ ಕೊಲೆಗಾರರೆಂದು ಬಿಂಬಿಸಿದ ನಳಿನ್ ಕುಮಾರ್ ಕಟೀಲ್‌ರಂತವರ ಸಂಖ್ಯೆ ಮತ್ತು ಅವರಂತಹ ವಿಚಾರಧಾರೆ ಇತ್ತೀಚಿಗೆ ಹೆಚ್ಚುತ್ತಿರುವುದು ಮುಂದಿನ ದಿನಗಳಲ್ಲಿ ದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು ಎಂದು ಅವರು ಟೀಕಿಸಿದ್ದಾರೆ.

ಭೋಪಾಲ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಾಥೂರಾಮ್ ಗೋಡ್ಸೆ ಭಯೋತ್ಪಾದಕನಲ್ಲ ಅವನೊಬ್ಬ ದೇಶಭಕ್ತ ಎನ್ನುವ ಹೇಳಿಕೆ ಹಾಗೂ ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರ ರ ಹೇಳಿಕೆಗಳು ದೇಶದ ಅಖಂಡತೆಗೆ ದಕ್ಕೆಯಾಗುವ ಹೇಳಿಕೆಗಳಾಗಿವೆ. ಇದನ್ನು ದೇಶದ ಜನತೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News