ರಾಬ್ರಿ ದೇವಿ ನಿವಾಸದಲ್ಲಿ ಕರ್ನಾಟಕ ಮೂಲದ ಯೋಧ ಆತ್ಮಹತ್ಯೆ

Update: 2019-05-18 14:52 GMT

ಪಾಟ್ನಾ, ಮೇ 18: ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಇಲ್ಲಿಯ ನಿವಾಸದಲ್ಲಿ ನಿಯೋಜಿಸಲಾಗಿದ್ದ ಸಿಆರ್‌ಪಿಎಫ್ ಯೋಧನೋರ್ವ ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಮೃತ ಸೈನಿಕನ್ನು ಕರ್ನಾಟಕದ ಬಾಗಲಕೋಟೆಯ ಮೂಲದ ಗಿರಿಯಪ್ಪ ಕಿರಸೂರು (29) ಎಂದು ಗುರುತಿಸಲಾಗಿದೆ.

ರಾಬ್ರಿ ದೇವಿ ಅವರ ಅತ್ಯುಚ್ಚ ಭದ್ರತೆಯ ಸರ್ಕ್ಯುಲರ್ ರಸ್ತೆ ಬಂಗ್ಲೆಯಲ್ಲಿ ಸಿಆರ್‌ಪಿಎಫ್‌ನ 122 ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಗಿರಿಯಪ್ಪ ಕಿರಸೂರ್ (29) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಉಪ ಅಧೀಕ್ಷಕ (ಸೆಕ್ರೇಟರಿಯೇಟ್) ಎ.ಕೆ. ಪ್ರಭಾಕರ್ ತಿಳಿಸಿದ್ದಾರೆ.

ಗಿರಿಯಪ್ಪ ಕಿರಸೂರು ಅವರು 2012ರಲ್ಲಿ ಸಿಆರ್‌ಪಿಎಫ್ ಸೇವೆಗೆ ಸೇರಿದ್ದರು. ಇತ್ತೀಚೆಗೆ ಅವರನ್ನು ರಾಬ್ರಿ ದೇವಿಯ ನಿವಾಸದಲ್ಲಿ ನಿಯೋಜಿಸಲಾಗಿತ್ತು.

 ಘಟನೆ ಕುರಿತು ಪೊಲೀಸರು ತುಟಿ ಬಿಚ್ಚುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಗಿರಿಯಪ್ಪ ಅವರ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ. ಕುಟುಂಬದ ಸಮಸ್ಯೆಗಳೊಂದಿಗೆ ಕೆಲಸದ ಒತ್ತಡ ಹಾಗೂ ರಜೆಯ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಗಿರಿಯಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ವಿಮಾನದ ಮೂಲಕ ಬಾಗಲಕೋಟೆಗೆ ಕಳುಹಿಸಿ ಕೊಡಲಾಗಿದೆ. ರಾಜ್ಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಪ್ರತ್ಯೇಕ ತನಿಖೆ ನಡೆಸುತ್ತಿದೆ ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ ಗರಿಮಾ ಮಲ್ಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News