ಮಹಿಳೆಯ ಬರ್ಬರ ಹತ್ಯೆ ಪ್ರಕರಣ: ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಹಂತಕ ಜೋನಸ್

Update: 2019-05-18 15:59 GMT

ಮಂಗಳೂರು, ಮೇ 18: ನಗರದ ಅಮರ್ ಆಳ್ವ ಲೈನ್ ನಿವಾಸಿ ಶ್ರೀಮತಿ ಶೆಟ್ಟಿ (35) ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಬಳಿಕ ಪೊಲೀಸರು ಆರೋಪಿಯನ್ನು ಕೃತ್ಯಕ್ಕೆ ಬಳಸಿದ ನಗರದ ನಾನಾ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.

ಆರೋಪಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಕದ್ರಿ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆತನನ್ನು ಕೊಲೆ ಕೃತ್ಯ ನಡೆದ ಆರೋಪಿ ಮನೆಗೆ ಕರೆದೊಯ್ದು ಮನೆಯಲ್ಲಿ ಮಹಜರು ನಡೆಸಲಾಯಿತು. ಈ ಸಂದರ್ಭ ಮನೆಯಲ್ಲಿ ಮಹಿಳೆಯ ನಾಲ್ಕು ಉಂಗುರ ಬೆಡ್ಡ್‌ನ ಅಡಿಯಲ್ಲಿ ಪತ್ತೆಯಾಗಿವೆ. ಇದು ಮಾತ್ರವಲ್ಲದೆ ಕೊಲೆಗೆ ಸಂಬಂಧಿಸಿ ಕೆಲವೊಂದು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆ ಬಳಿಕ ಮೃತದೇಹ ಪತ್ತೆಯಾದ ನಂದಿಗುಡ್ಡ, ರುಂಡ ಪತ್ತೆಯಾದ ಕದ್ರಿ ಪೆಟ್ರೋಲ್ ಪಂಪ್ ಎದುರಿನ ಜಾಗ ಹಾಗೂ ಕಾಲು ಪತ್ತೆಯಾದ ಕದ್ರಿ ಪಾರ್ಕ್ ಜಾಗ, ಶ್ರೀಮತಿ ಶೆಟ್ಟಿಯ ಸ್ಕೂಟರ್ ಇಡಲಾದ ನಾಗುರಿ ಪ್ರದೇಶಕ್ಕೆ ಕರೆದೊಯ್ದು ಆರೋಪಿಯೊಂದಿಗೆ ಮಹಜರು ನಡೆಸಲಾಯಿತು. ಈ ಸಂದರ್ಭ ಆರೋಪಿ ಕೃತ್ಯದ ಬಗ್ಗೆ ವಿವರವಾಗಿ ಪೊಲೀಸರ ಬಳಿ ಹೇಳಿದ್ದಾನೆ.

ಸ್ಕೂಟರ್ ಕೀ ಪತ್ತೆ: ಶ್ರೀಮತಿ ಶೆಟ್ಟಿಯವರ ಸ್ಕೂಟರ್‌ನ್ನು ನಾಗುರಿ ರಸ್ತೆ ಬದಿ ಮೇ 11ರಂದು ಪಾರ್ಕ್ ಮಾಡಿದ ಆರೋಪಿ, ಸ್ಕೂಟರ್ ಕೀಯನ್ನು ಅಲ್ಲೇ ಹಳೆ ಕಾರುಗಳು ಪಾರ್ಕ್ ಮಾಡಿದ ಸ್ಥಳದಲ್ಲಿ ಬಿಸಾಡಿದ್ದಾನೆ. ಈ ಜಾಗದಲ್ಲಿ ಪೊಲೀಸರು ತುಂಬಾ ಹೊತ್ತು ಹುಡುಕಿದ ಬಳಿಕ ಸ್ಕೂಟರ್ ಕೀ ಪತ್ತೆಯಾಗಿದೆ.

ಪ್ರಕರಣ ವಿವರ

ಶ್ರೀಮತಿ ಶೆಟ್ಟಿ ಮೇ 11ರಂದು ಬೆಳಗ್ಗೆ ವೆಲೆನ್ಸಿಯಾ ಸೂಟರ್‌ಪೇಟೆಯಲ್ಲಿರುವ ಜೋನಸ್ ಮನೆಗೆ ಸಾಲದ ಹಣ ಕೇಳಲು ಹೋದಾಗ ಮಾರಕಾಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಜೋನಸ್ ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ಸೇರಿ ಮೃತದೇಹವನ್ನು ಅಡುಗೆ ಮನೆಯಲ್ಲಿಟ್ಟಿದ್ದರು.

ಘಟನೆ ಬಳಿಕ ವಿಕ್ಟೋರಿಯಾ ತಾಯಿ ಮನೆಗೆ ಹೋಗಿದ್ದರೆ, ಆರೋಪಿ ಜೋನಸ್ ಹೊರಗೆ ಹೋದಾತ ಸಂಜೆ ವೇಳೆ ಮರಳಿ ಮನೆಗೆ ಬಂದು ಮೃತದೇಹವನ್ನು ಮೂರು ಭಾಗವಾಗಿ ತುಂಡರಿಸಿದ್ದಾನೆ. ಬಳಿಕ ಮೃತದೇಹವನ್ನು ಸ್ಕೂಟರ್‌ನಲ್ಲಿ ಕೊಂಡೊಯ್ದು ಕದ್ರಿ, ಕದ್ರಿಪಾರ್ಕ್, ನಂದಿಗುಡ್ಡದಲ್ಲಿ ಬಿಸಾಡಿದ್ದಾನೆ. ಮೇ 12ರಂದು ಪ್ರಕರಣ ಬೆಳಕಿಗೆ ಬಂದಿದ್ದು ಕದ್ರಿ ಪೆಟ್ರೋಲ್ ಪಂಪ್ ಎದುರು ರುಂಡ, ನಂದಿಗುಡ್ಡೆಯಲ್ಲಿ ದೇಹ ಹಾಗೂ ಮೇ 15ರಂದು ಕದ್ರಿ ಪಾರ್ಕ್ ರಸ್ತೆಯಲ್ಲಿ ಕಾಲು ಪತ್ತೆಯಾಗಿತ್ತು.

ಶ್ರೀಮತಿ ಶೆಟ್ಟಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News